ಮೈಸೂರು: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನ ಶ್ರೀನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸುವ ಭಕ್ತರು ಕಪಿಲಾ ನದಿಯ ಸ್ನಾನಘಟ್ಟಕ್ಕೆ ತೆರಳದಂತೆ ನಿರ್ಬಂಧ ವಿಧಿಸಿ ತಾಲೂಕು ಆಡಳಿತ ಆದೇಶ ಹೊರಡಿಸಿದೆ.
ಮೈಸೂರು ನಂಜನಗೂಡು ಮುಖ್ಯ ರಸ್ತೆಯ ನೂರು ವರ್ಷಗಳ ಹಳೆಯ ದೇವರಾಜ ಅರಸು ಸೇತುವೆ ಮೂಲಕ ಬಾರಿ ಪ್ರಮಾಣದ ನೀರು ಹರಿಯ ತೊಡಗಿದೆ. ಈಗಾಗಲೇ ಕಬಿನಿ ನಾಲೆಯಿಂದ ಒಟ್ಟಾರೆಯಾಗಿ ಕಪಿಲ ನದಿಗೆ 36,000 ಕ್ಯೂಸಕ್ ನೀರು ಹರಿ ಬಿಡಲಾಗಿದೆ. ನಂಜನಗೂಡು ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯ, ನಂಜುಂಡೇಶ್ವರನ ದೇವಾಲಯದ ಸ್ನಾನಘಟ್ಟ, ಹದಿನಾರು ಕಾಲು ಮಂಟಪ ಭಾಗಶಃ ಮುಳುಗಡೆಯಾಗಿವೆ. ಹಾಗಾಗಿ ಭಕ್ತರು ತೆರಳದಂತೆ ನಿರ್ಬಂಧ ವಿಧಿಸಲಾಗಿದೆ.
ದೇವಾಲಯದ ಹಿಂಬದಿಯಲ್ಲಿರುವ ತಗ್ಗು ಪ್ರದೇಶಗಳಾದ ತೋಪಿನ ಬೀದಿ, ಒಕ್ಕಲ ಗೇರಿ, ಹಳ್ಳದ ಕೇರಿ, ರಾಯರ ಮಠ, ಸೇರಿದಂತೆ ಸಾಕಷ್ಟು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ನಂಜನಗೂಡಿನ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ನೇತೃತ್ವದಲ್ಲಿ ಅಧಿಕಾರಿಗಳ ತಂಡ ತಗ್ಗು ಪ್ರದೇಶದ ಜನ ವಸತಿ ಪ್ರದೇಶಕ್ಕೆ ತೆರಳಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಮೂರ್ನಾಲ್ಕು ದಿನಗಳ ಕಾಲ ನಿರಂತರವಾಗಿ ಮಳೆ ಸುರಿಯುವ ಕಾರಣ ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ. ಜನ ಜಾನುವಾರುಗಳೊಂದಿಗೆ ಸುರಕ್ಷಿಯ ಸ್ಥಳಗಳಿಗೆ ಸ್ಥಳಾಂತರವಾಗುವಂತೆ ಸೂಚಿಸಿದ್ದಾರೆ.