ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೆ ಮಾಡಿದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಆರೋಪಿಗಳಾದ ನವೀನ್ ಗೌಡ ಅಲಿಯಾಸ್ ಎನ್.ಆರ್.ನವೀನ್ ಕುಮಾರ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.
ನವೀನ್ ಗೌಡ, ಎನ್.ಕಾರ್ತಿಕ್, ಬಿ.ಸಿ.ಚೇತನ್ ಕುಮಾರ್ ಮತ್ತು ಎಚ್.ವಿ.ಪುಟ್ಟರಾಜು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ನ್ಯಾಯಪೀಠ ಕೈಗೆತ್ತಿಕೊಂಡಿತು.
ವಿಚಾರಣೆಯಲ್ಲಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಸರ್ಕಾರಿ ವಕೀಲರು ಮನವಿ ಮಾಡಿದರು. ವಿಚಾರಣೆಗೆ ಖುದ್ದು ಹಾಜರಾಗಿದ್ದ ದೂರುದಾರ ಎಂ.ಜಿ.ಪೂರ್ಣಚಂದ್ರ ತೇಜಸ್ವಿ, ತಮ್ಮ ವಕೀಲರನ್ನು ನಿಯೋಜಿಸಿಕೊಳ್ಳಲು ಕೋರಿದರು. ಅದನ್ನು ಪರಿಗಣಿಸಿದ ಕೋರ್ಟ್ ಸೋಮವಾರಕ್ಕೆ ವಿಚಾರಣೆ ಮುಂದೂಡಿದೆ.
ಆರೋಪಿ ಬಿ.ಸಿ.ಚೇತನ್ ಪರ ವಕೀಲರು, ಎಸ್‌ಐಟಿ ಅಧಿಕಾರಿಗಳು ಇಂದು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಪದೇ ಪದೇ ಸೂಚಿಸುತ್ತಿದ್ದಾರೆ. ಇದರಿಂದ ಬಂಧನ ಭೀತಿ ಇದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಪ್ರಕರಣದ ಹಿನ್ನೆಲೆ: ಪೆನ್‌ಡ್ರೈವ್ ಹಂಚಿಕೆ ಆರೋಪ ಸಂಬಂಧ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಹಾಗೂ ಬಿಜೆಪಿ ಚುನಾವಣಾ ಏಜೆಂಟ್ ಆಗಿದ್ದ ಎಂ.ಜಿ.ಪೂರ್ಣಚಂದ್ರ ತೇಜಸ್ವಿ ಹಾಸನ ಸಿಇಎನ್ ಪೊಲೀಸ್ ಠಾಣೆಗೆ 2024ರ ಏ.23ರಂದು ದೂರು ನೀಡಿದ್ದರು. ಹಾಸನ ಲೋಕಸಭೆ ಕ್ಷೇತ್ರದ ಚುನಾವಣೆ ಏ.26ರಂದು ನಿಗದಿಯಾಗಿತ್ತು. ಆರೋಪಿಗಳಾದ ನವೀನ್ ಗೌಡ ಹಾಗೂ ಇತರರು ಏ.21ರಂದು ಸಂಜೆ 6.30ರಿಂದ ಹಾಸನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ನಕಲಿ ಅಶ್ಲೀಲ ಭಾವಚಿತ್ರ ಮತ್ತು ವಿಡಿಯೋಗಳನ್ನು ಒಳಗೊಂಡ ಸಿಡಿ ಹಾಗೂ ಪೆನ್‌ಡ್ರೈವ್ ಸಿದ್ಧಪಡಿಸಿಕೊಂಡಿದ್ದರು.
ಈ ವಿಡಿಯೋ ಮತ್ತು ಫೋಟೋಗಳನ್ನು ಕ್ಷೇತ್ರ ವ್ಯಾಪ್ತಿಯ ಮನೆ ಮನೆಗೆ ತೆರಳಿ ಮತದಾರರಿಗೆ ಹಂಚಿದ್ದಾರೆ. ವಾಟ್ಸ್‌ಆ್ಯಪ್/ಮೊಬೈಲ್‌ಗಳಲ್ಲಿ ತೋರಿಸಿ ಜನರ ದಿಕ್ಕು ತಪ್ಪಿಸಿ ಪ್ರಜ್ವಲ್ ರೇವಣ್ಣಗೆ ಮತ ಹಾಕದಂತೆ ಪ್ರಚೋದಿಸುತ್ತಿದ್ದಾರೆ. ಆ ಮೂಲಕ ಚುನಾವಣೆಯಲ್ಲಿ ನ್ಯಾಯಯುತ ಮತದಾನ ನಡೆಯುವುದನ್ನು ತಪ್ಪಿಸುವ ದುಷ್ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಇದರಿಂದ ಬಂಧನ ಭೀತಿಯಲ್ಲಿದ್ದ ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ:ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ; ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆಯಲು ಎಸ್ಐಟಿ ಕಾರ್ಯತಂತ್ರ - Prajwal Revanna