ಬೆಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಉಮಿಕಲ್ ಬೆಟ್ಟದಲ್ಲಿ ಪರಶುರಾಮನ ಕಂಚಿನ ಪ್ರತಿಮೆ ರಚನೆಯಲ್ಲಿ ಅಕ್ರಮವೆಸಗಿದ ಆರೋಪ ಎದುರಿಸುತ್ತಿರುವ ಶಿಲ್ಪ ಕಲಾವಿದ ಹಾಗೂ ಕ್ರಿಷ್ ಆರ್ಟ್ ವರ್ಲ್ಡ್ ಮುಖ್ಯಸ್ಥ ಕೃಷ್ಣ ನಾಯಕ್ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಆರೋಪ ಸಂಬಂಧ ಕಾರ್ಕಳ ಟೌನ್ ಪೊಲೀಸರು ದಾಖಲಿಸಿರು ಎಫ್‌ಐಆರ್ ಹಾಗೂ ಕಾರ್ಕಳ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಕೃಷ್ಣ ನಾಯಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಸೆಪ್ಟಂಬರ್ 10ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್, ಪ್ರಕರಣದ ತನಿಖೆಗೆ ಸರ್ಕಾರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದೆ. ಇದಲ್ಲದೆ, ಪ್ರಕರಣವನ್ನು ಸಿಐಡಿಗೂ ವಹಿಸಲಾಗಿದೆ. ಅದಕ್ಕೆ ನ್ಯಾಯಾಲಯದಲ್ಲಿ ತಡೆ ಇದೆ. ಈ ಮಧ್ಯೆ ಖಾಸಗಿ ದೂರೊಂದು ದಾಖಲಿಸಲಾಗಿದೆ. ಈ ರೀತಿ ಮೂರು ಬಗೆಯಲ್ಲಿ ಪ್ರಕರಣ ನಡಿತಿದೆ. ಹೀಗಿರುವಾಗ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿಯ ಅಣತಿಯಂತೆ ಕಾರ್ಕಳದ ಪೊಲೀಸರು ಬೆಂಗಳೂರಿಗೆ ಬಂದು ಅರ್ಜಿದಾರರ ಮನೆಯಿಂದ ವಸ್ತುಗಳು ಹಾಗೂ ಪ್ರತಿಮೆಯನ್ನು ಎತ್ತಿಕೊಂಡು ಹೋಗಿದ್ದಾರೆ. ನಿರ್ಮಿತಿ ಕೇಂದ್ರಕ್ಕೆ ಕೊಡಲಾದ ಕಾರ್ಯಾದೇಶದಂತೆ ಅರ್ಜಿದಾರರು ತಮ್ಮ ಕೆಲಸ ಮಾಡುತ್ತಿದ್ದಾರೆ. ಕಾನೂನು ತೊಡಕುಗಳನ್ನು ಸೃಷ್ಟಿಸಿ ಕಾಮಗಾರಿ ಪೂರ್ಣಗೊಳಿಸಲು ಅಡ್ಡಿಪಡಿಸಲಾಗುತ್ತಿದೆ. ಪ್ರಕರಣ ರದ್ದುಪಡಿಸಬೇಕು ಮತ್ತು ಕಾಮಗಾರಿ ಮುಂದುವರಿಸಲು ನಿರ್ಮಿತಿ ಕೇಂದ್ರಕ್ಕೆ ಅನುಮತಿಸಬೇಕೆಂದು ಕೋರಿದರು.