ಶಿವಮೊಗ್ಗ: ಮಳೆ ಕೊರತೆಯಿಂದ ನದಿಗಳು ಹರಿಯುವಿಕೆಯನ್ನೇ ನಿಲ್ಲಿಸಿವೆ. ಹಳ್ಳಕೊಳ್ಳಗಳು ಬತ್ತಿ ಹೋಗಿವೆ. ಇದರಿಂದ ಕಾಡು ಪ್ರಾಣಿಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿವೆ. ಕಾಡು ಪ್ರಾಣಿಗಳಿಗಾಗಿಯೇ ಇಲ್ಲೂಬ್ಬ ರೈತ ತಮ್ಮ ಬೋರ್ವೆಲ್ ನೀರನ್ನು ನದಿಗೆ ಬಿಟ್ಟು ನದಿಯನ್ನು ಜೀವಂತವಾಗಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಕಾಡು ಪ್ರಾಣಿಗಳ ದಾಹ ನೀಗಿಸಲು ನದಿಗೆ ಬೋರ್ವೆಲ್ ನೀರು ಹರಿಸುವ ರೈತ ಪಾಪಣ್ಣ ಭಟ್ಟರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಸೂಡೂರು ಗೇಟ್ ನಿವಾಸಿ ಮಂಜುನಾಥ ಅಲಿಯಾಸ್ ಪಾಪಣ್ಣ ಭಟ್ಟ ಎಂಬವರು ನಿತ್ಯ ಕುಮದ್ವತಿ ನದಿಗೆ ಎರಡು ಗಂಟೆಗಳ ಕಾಲ ನೀರು ಹಾಯಿಸುವ ಕೆಲಸವನ್ನು ಕಳೆದ 15 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಮಂಜನಾಥ ಭಟ್ಟರ ಜಮೀನು ಕುಮದ್ವತಿ ನದಿಯ ಪಕ್ಕದಲ್ಲಿಯೇ ಇದೆ. ಈ ನದಿ ನೀರನ್ನು ಕುಡಿಯಲು ಕಾಡು ಪ್ರಾಣಿಗಳಾದ ಕಾಡುಕೋಣ, ಜಿಂಕೆ, ಮೊಲ, ಮುಂಗುಸಿ, ನವಿಲು ಸೇರಿದಂತೆ ಇತರೆ ಪ್ರಾಣಿಗಳು ಬರುತ್ತವೆ. ಈ ಪ್ರಾಣಿಗಳು ನೀರಿಲ್ಲದ ವೇಳೆ ಜೋರಾಗಿ ಕೂಗಲು ಪ್ರಾರಂಭಿಸುತ್ತವೆ. ಅವುಗಳ ಬವಣೆ ಆಲಿಸಿ, ಸ್ಪಂದಿಸುತ್ತಿರುವ ಪಾಪಣ್ಣ ಭಟ್ಟರು ನದಿಗೆ ನೀರು ಹರಿಸುತ್ತಿದ್ದಾರೆ.
ಮಂಜುನಾಥ ಭಟ್ಟರು ತಮಗೆ ವಿದ್ಯುತ್ ಲಭ್ಯವಾಗುವ ಸಮಯ ನೋಡಿಕೊಂಡು ಸತತ ಎರಡು ಗಂಟೆಗಳ ಕಾಲ ನದಿಗೆ ನೀರನ್ನು ಹಾಯಿಸುತ್ತಾರೆ. ನಂತರ ನಾಲ್ಕು ಗಂಟೆಗಳ ಕಾಲ ತಮ್ಮ ಜಮೀನಿಗೆ ನೀರು ಬಿಡುತ್ತಾರೆ. ತಮ್ಮ ಜೀವನದ ಜೊತೆಗೆ ಕಾಡು ಪ್ರಾಣಿಗಳ ಜೀವನದ ಬಗ್ಗೆಯೂ ಕಾಳಜಿ ಹೊಂದಿರುವ ಪಾಪಣ್ಣ, ಸರ್ಕಾರದ ಉಚಿತ ವಿದ್ಯುತ್ ಇವರಿಗೆ ಸದ್ಯ ವರದಾನವಾಗಿದೆ. ಇವರು ಕೃಷಿಯ ಜೊತೆ ಕೊಳವೆ ಬಾವಿ ರಿಪೇರಿ, ಹಾವುಗಳ ಸಂರಕ್ಷಣೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕಾಡು ಪ್ರಾಣಿಗಳ ದಾಹ ನೀಗಿಸಲು ನದಿಗೆ ಬೋರ್ವೆಲ್ ನೀರು ಹರಿಸುವ ರೈತ ಪಾಪಣ್ಣ ಭಟ್ಟರು ಮಂಜುನಾಥ್ ಭಟ್ಟರ ಮಾತು:"ಬರಗಾಲ ಕಾಲಿಡುತ್ತಿದ್ದಂತೆ ಕುಮದ್ವತಿ ನದಿ ಹರಿವು ನಿಲ್ಲಿಸುತ್ತಾಳೆ. ನದಿಯಲ್ಲಿ ನೀರಲ್ಲದೆ ಕಾಡು ಪ್ರಾಣಿಗಳಿಗೆ ಸಮಸ್ಯೆ ಉಂಟಾಗುತ್ತದೆ. ರಾತ್ರಿ ಹೊತ್ತು ನೀರಿಗೆ ಬಂದು, ನೀರಿಲ್ಲದೇ ಇದ್ದಾಗ ಅವುಗಳ ಕೂಗು ಕೇಳಲು ಕಷ್ಟವಾಗುತ್ತದೆ. ಹಾಗಾಗಿ ನಾನು ನನ್ನ ಜಮೀನಿನ ಬೋರ್ವೆಲ್ನಿಂದ ಪ್ರತಿನಿತ್ಯ ಎರಡು ಗಂಟೆಗಳ ಕಾಲ ನದಿಗೆ ನೀರು ಬಿಡುತ್ತಿದ್ದೇನೆ. ನದಿಯಲ್ಲಿ ನೀರು ಕುಡಿಯಲು ಜಿಂಕೆ, ಕಾಡುಕೋಣ, ಮುಂಗುಸಿ, ನವಿಲು, ಮಂಗಗಳು ಬರುತ್ತವೆ" ಎಂದರು.
"ಪ್ರತಿನಿತ್ಯ 6 ಗಂಟೆ ಕರೆಂಟ್ ಇರುತ್ತದೆ. ನದಿಗೆ ಎರಡು ಗಂಟೆ ನೀರು ಬಿಟ್ಟರೆ ಉಳಿದ ನಾಲ್ಕು ಗಂಟೆ ಜಮೀನಿಗೆ ನೀರು ಹಾಯಿಸುತ್ತೇನೆ. ಕಾಡು ಪ್ರಾಣಿಗಳು, ಪಕ್ಷಿಗಳು ನೀರು ಕುಡಿಯುವುದನ್ನು ನೋಡುವುದೇ ಖುಷಿ. ಅದನ್ನು ನೋಡುವುದೇ ಚೆಂದ. ಈ ಕೆಲಸದಲ್ಲಿ ನನಗೂ ಖುಷಿ ಸಿಗುತ್ತದೆ. ಈ ಕೆಲಸವನ್ನು ನಾನು 15 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇನೆ. ಇದನ್ನು ನೋಡಿ ಕೆಲವರು ನನಗೆ ಹುಚ್ಚು ಎನ್ನುತ್ತಾರೆ. ಮಳೆಗಾಲದಲ್ಲಿ ಭತ್ತ ನಾಟಿ ಮಾಡುವಾಗ ನದಿಯಿಂದ ನೀರನ್ನು ತೆಗೆದುಕೊಳ್ಳುತ್ತೇನೆ. ಈಗ ಬರಗಾಲದಲ್ಲಿ ನದಿ ಬತ್ತಿದಾಗ ಅದಕ್ಕೆ ನೀರು ಹಾಕುತ್ತೇನೆ. ಮೋಟಾರು ಕೆಟ್ಟು ಹೋದಾಗ ಸಣ್ಣ ಪುಟ್ಡ ಕೆಲಸವನ್ನು ನಾನೇ ಮಾಡಿಕೊಳ್ಳುತ್ತೇನೆ. ಅದನ್ನು ಬಿಟ್ಟರೆ, ಬೇರೆ ಖರ್ಚಿಲ್ಲ. ಸದ್ಯ ಸರ್ಕಾರ ವಿದ್ಯುತ್ ಉಚಿತವಾಗಿ ನೀಡುತ್ತಿದೆ. ಇದರಿಂದ ನೀರು ಹಾಯಿಸಲು ಸಮಸ್ಯೆ ಇಲ್ಲ" ಎನ್ನುತ್ತಾರೆ ಪಾಪಣ್ಣ ಭಟ್ಟರು.
ಮಂಜುನಾಥ ಭಟ್ಟರ ಈ ಕೆಲಸವನ್ನು ಗ್ರಾಮಸ್ಥರೂ ಮೆಚ್ಚಿಕೊಂಡಿದ್ದಾರೆ. ಗ್ರಾಮಸ್ಥ ಬಸಪ್ಪ ಅವರು ಮಾತನಾಡಿ, "ಎಲ್ಲರೂ ನದಿಯಿಂದ ನೀರನ್ನು ತೆಗೆದುಕೊಳ್ಳುತ್ತಾರೆ. ಆದರೆ ಇವರು ನದಿಗೆ ನೀರನ್ನು ಬಿಟ್ಟು ಕಾಡು ಪ್ರಾಣಿಗಳ ದಾಹ ತೀರಿಸುತ್ತಿದ್ದಾರೆ. ಈಗಾಗಲೇ ನದಿಯು ಬತ್ತಿ ಹೋಗಿದೆ. ಆದರೆ ಭಟ್ಟರು ನದಿಗೆ ನೀರು ಬಿಟ್ಟು ನದಿಯಲ್ಲಿ ನೀರು ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಇವರಿಗೆ ಸಹಾಯ ಮನೋಭಾವ ಹೆಚ್ಚಿದೆ. ಯಾರದ್ದೇ ಮನೆಯಲ್ಲಿ ಏನೇ ಸಮಸ್ಯೆ ಇದ್ದರೂ ಸಹ ಇವರು ಮುಂದೆ ನಿಂತು ಪರಿಹರಿಸುತ್ತಾರೆ" ಎನ್ನುತ್ತಾರೆ.
ಇದನ್ನೂ ಓದಿ:ಬತ್ತಿದ ನದಿಗೆ ಕೊಳವೆ ಬಾವಿಯಿಂದ ನೀರು ಹರಿಸಿ ಪ್ರಾಣಿ, ಪಕ್ಷಿಗಳ ದಾಹ ನೀಗಿಸುತ್ತಿರುವ ಹಾವೇರಿ ರೈತ - Water from Borewell To River