ಶಿವಮೊಗ್ಗ: ಕಳೆದ ಮೂರು ವರ್ಷಗಳಿಂದ ಪಂಚಮಸಾಲಿ ಸಮುದಾಯವನ್ನು ಕೇಂದ್ರದಲ್ಲಿ ಒಬಿಸಿ ಪಟ್ಟಿಗೆ ಸೇರ್ಪಡೆಯಾಗಬೇಕು ಹಾಗೂ ರಾಜ್ಯದಲ್ಲಿ 2ಎ ಗೆ ಸೇರ್ಪಡೆಯಾಗಬೇಕು ಎಂದು ಹೋರಾಟಗಳು ನಡೆದುಕೊಂಡು ಬಂದಿವೆ. ಇದೀಗ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳ ನೇತೃತದಲ್ಲಿ ಮೀಸಲಾತಿ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸುವ ಸಲುವಾಗಿ ಶಿವಮೊಗ್ಗದಲ್ಲೂ ಹೋರಾಟ ನಡೆಸಲಾಗಿದೆ.
ನಗರದ ಚೌಕಿ ಮಠದಲ್ಲಿ ಲಿಂಗದೀಕ್ಷೆ ಪೂಜೆ ನಡೆಸಿದ ಜಯಮೃತ್ಯುಂಜಯ ಶ್ರೀಗಳು ಅಲ್ಲಿಂದ ತಮ್ಮ ಹೋರಾಟಕ್ಕೆ ಚಾಲನೆ ನೀಡಿದರು. ಚೌಕಿ ಮಠದಿಂದ ಹೊರಟ ಮೆರವಣಿಗೆಯು ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆಯ ಮೂಲಕ ಟಿ.ಎಸ್ ಶೀನಪ್ಪ ಶೆಟ್ಟಿ ವೃತ್ತದವರೆಗೂ ಸಾಗಿತು. ಈ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಯಿತು. ಸಭೆಯಲ್ಲಿ ಪಂಚಮಸಾಲಿ ಸಮುದಾಯದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ನಮ್ಮ ಹೋರಾಟ ಸಮುದಾಯದ ಭವಿಷ್ಯದ ಸಲುವಾಗಿ ನಡೆಸಲಾಗುತ್ತಿದೆ. ಇದು ಯಾರನ್ನೂ ಮುಖ್ಯಮಂತ್ರಿ ಮಾಡಲು, ಒಂದು ಪಕ್ಷವನ್ನು ಕೈಯಲ್ಲಿ ಇಟ್ಟುಕೊಳ್ಳಲು ಅಥವಾ ಕೇವಲ ವೀರಶೈವ ಲಿಂಗಾಯತಕ್ಕೆ ಅಷ್ಟೇ ಅಲ್ಲ. ಇದು ದಲಿತರು, ಹಿಂದುಳಿದವರು, ಮರಾಠರು ಸೇರಿದಂತೆ ಎಲ್ಲರನ್ನು ಒಳಗೊಂಡು ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತಿದೆ.
ನಾನು ಸದನದಲ್ಲಿ ಒಂದು ಸಮುದಾಯದ ಪರ ಮಾತನಾಡಿಲ್ಲ. ನಾನು ಹಿಂದೂ ಸಮಾಜದ ಪರವಾಗಿ ಮಾತನಾಡಿದ್ದೇನೆ. ಎಲ್ಲ ಸಮುದಾಯಗಳ ಪರವಾಗಿ ಹೋರಾಟ ಮಾಡಿದ್ದೇವೆ. ದಾವಣಗೆರೆಯಲ್ಲಿ ನಡೆದ ವೀರಶೈವರ ಸಭೆಯಲ್ಲಿ ನಾವು ಹಿಂದೂಗಳಲ್ಲ ಎಂದು ತೀರ್ಮಾನ ಮಾಡಿದ್ದಾರೆ. ನಾವು ಹಿಂದೂಗಳು ಅಲ್ಲ ಎಂದರೆ, ಭಾರತದಲ್ಲಿ ನಮಗೆ ಜಾಗವೇ ಇಲ್ಲ. ಭಾರತದಲ್ಲಿ ಇರುವವರೆಲ್ಲರೂ ಹಿಂದೂಗಳು. ನಮ್ಮ ಹೋರಾಟವನ್ನು ಹಾಳು ಮಾಡಬೇಕು. ಪಾದಯಾತ್ರೆ ನಡೆಯಬಾರದು ಎಂದು ಸಾಕಷ್ಟು ಜನ ಕೆಲಸ ಮಾಡಿದ್ದರು. ನಮ್ಮ ಗುರುಗಳಿಗೆ 10 ಕೋಟಿ ರೂ. ತೆಗೆದುಕೊಂಡ ಹೊಸಪೇಟೆಗೆ ನಮ್ಮ ಸಮಾಜದ ಮಂತ್ರಿಗಳು ಬಂದಿದ್ದರು. ಆದರೆ 10 ಕೋಟಿ ರೂ. ತೆಗೆದುಕೊಂಡು ನಮ್ಮ ಸಮಾಜವನ್ನು ನಾನು ಹಾಳು ಮಾಡಲ್ಲ ಎಂದು ಶ್ರೀಗಳು ಹೇಳಿದ್ದರು. ನಮಗೆ ರಾಜಕೀಯವಾಗಿ ಮೀಸಲಾತಿ ಬೇಡ. ನಮ್ಮ ಸಮುದಾಯದ ಬಡ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಮೀಸಲಾತಿ ಹೋರಾಟ ನಡೆಸುತ್ತಿದ್ದೇವೆ ಎಂದರು.
ಶ್ರೀಗಳು ಹೇಳಿದ್ದಿಷ್ಟು :ನಂತರ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮಿಜೀಗಳು, ಹೊಸ ಸರ್ಕಾರ ಬಂದಾಗ ಮೀಸಲಾತಿ ಹೋರಾಟ ಮಾಡಲ್ಲ ಎಂಬ ತಪ್ಪು ಸಂದೇಶ ಸಾರಿದ್ದರು. ಆದರೆ, ನಮಗೆ ಮೀಸಲಾತಿ ಸಿಗುವವರೆಗೂ ಹೋರಾಟ ನಡೆಸುತ್ತೇವೆ. ಶಿವಮೊಗ್ಗದಲ್ಲಿ ಹೋರಾಟ ಮಾಡಲು ಎಂಟೆದೆ ಬೇಕಾಗುತ್ತದೆ. ನಮ್ಮ ಸಮಾಜಕ್ಕೆ ಮೀಸಲಾತಿ ಸಿಗಬಾರದು ಎಂದು ಅಡ್ಡ ಮಾಡಿದ ವ್ಯಕ್ತಿಗಳು ಇರುವ ಕ್ಷೇತ್ರದಲ್ಲಿ ಹೋರಾಟ ಮಾಡುತ್ತಿದ್ದೇವೆ. ನಮ್ಮದು ಸರ್ಕಾರದ ವಿರುದ್ಧ ಹೋರಾಟವೇ ಹೊರತು ವ್ಯಕ್ತಿಗಳ ವಿರುದ್ದದ ಹೋರಾಟ ಅಲ್ಲ. ನಮ್ಮದು ಅಖಂಡ ಮೀಸಲಾತಿಗಾಗಿ ಹೋರಾಟ. ನಮಗೆ ಹೋರಾಟ ಮಾಡಲು ಅವಕಾಶ ನೀಡಿದ್ದರೆ, ನಾಯಕರಾಗಿ ಬೆಳೆಯುತ್ತೇವೆ ಎಂದು ತಿಳಿದು ನಮಗೆ ಅವಕಾಶ ನೀಡಿಲ್ಲ. ಲೋಕಸಭೆ ಚುನಾವಣೆಯ ಒಳಗೆ ಮೀಸಲಾತಿ ನೀಡದೇ ಹೋದರೆ ಚುನಾವಣೆಯಲ್ಲಿ ಪಾಠ ಕಲಿಸಲಾಗುವುದು ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ :ಮೀಸಲಾತಿ ಭಿಕ್ಷೆಯಲ್ಲ, ಅದು ನಿಮ್ಮ ಹಕ್ಕು: ವಾಲ್ಮೀಕಿ ಜಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ