ಕಾರವಾರ: ಜಾನಪದ ಗಾಯಕಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಡುಹಕ್ಕಿ ಸುಕ್ರಿ ಬೊಮ್ಮ ಗೌಡ (88) ಅವರು ವಯೋಸಹಜ ಕಾಯಿಲೆಗಳಿಂದ ಗುರುವಾರ ನಸುಕಿನ ಜಾವ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಿಗೇರಿಯ ಸುಕ್ರಜ್ಜಿ ಕಳೆದ ಹಲವು ವರ್ಷದಿಂದ ಉಸಿರಾಟದ ಸಮಸ್ಯೆ ಸೇರಿದಂತೆ ಕೆಲ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಕಳೆದ ಎರಡು ದಿನದ ಹಿಂದೆಯೂ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದರು. ಆದರೆ, ಗುರುವಾರ ಇಂದು ನಸುಕಿನ ಜಾವ ಸುಮಾರು 3.30 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ಸುಕ್ರಿ ಗೌಡ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕ್ಷಣ (IANS) ಸಾರಾಯಿ ಮುಕ್ತ ಗ್ರಾಮಕ್ಕಾಗಿ ಹೋರಾಟ:ನಾಡೋಜ, ರಾಜ್ಯೋತ್ಸವ, ಜಾನಪದ ಶ್ರೀ ಪ್ರಶಸ್ತಿ ಪಡೆದಿದ್ದ ಸುಕ್ರಜ್ಜಿ 2017 ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು. ಜಾನಪದ ಹಾಡುಗಳ ಮೂಲಕ ಸಮುದಾಯದ ಮಹಿಳೆಯ ಪರಿಚಯಿಸುವ ಕಾರ್ಯ ನಿರ್ವಹಿಸಿದ್ದ ಸುಕ್ರಜ್ಜಿ ಉತ್ತರಕನ್ನಡ ಜಿಲ್ಲೆಗೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ, ತಮ್ಮೂರನ್ನು ಸಾರಾಯಿ ಮುಕ್ತ ಗ್ರಾಮವನ್ನಾಗಿಸಲು ಹೋರಾಟಗಳ ಮೂಲಕ ಮುಂಚೂಣಿಯಲ್ಲಿ ಇರುತ್ತಿದ್ದರು.
ಪ್ರಧಾನಿ ಮೋದಿ, ಪದ್ಮಶ್ರೀ ಸುಕ್ರಿ ಗೌಡ ಭೇಟಿ (IANS) ದುರ್ದೈವದ ಸಂಗತಿ ಅಂದರೆ ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಗಾಗಿ ಹೋರಾಟ ಮಾಡಿದ್ದರೂ ಕೂಡ ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆಗಳಿಲ್ಲದೇ ಹಲವು ಬಾರಿ ಚಿಕಿತ್ಸೆಗಾಗಿ ದೂರದ ಮಂಗಳೂರು, ಮಣಿಪಾಲ್ಗೆ ತೆರಳಿ ಆಸ್ಪತ್ರೆಗೆ ದಾಖಲಾಗುವಂತಾಗಿತ್ತು. ಬಡಗೇರಿಯನ್ನು ಸಾರಾಯಿ ಮುಕ್ತ ಗ್ರಾಮ ಮಾಡುವಲ್ಲಿ ಅವಿರತವಾಗಿ ಹೋರಾಡಿದ್ದ ಸುಕ್ರಜ್ಜಿ, ಯಾವುದೇ ಕಾರ್ಯಕ್ರಮಗಳಿಗೆ ಹೋದಾಗಲೂ ಸಾರಾಯಿ ತ್ಯಜಿಸುವಂತೆ ಕರೆ ನೀಡುತ್ತಿದ್ದರು. ಅಲ್ಲದೇ ಜಿಲ್ಲೆಯ ಅನೇಕ ಹೋರಾಟಗಳಲ್ಲಿ ಸುಕ್ರಜ್ಜಿ ಮುಂಚೂಣಿಯಲ್ಲಿ ಇದ್ದು, ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆ ಅಷ್ಟಾಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.
ಗಣ್ಯರಿಂದ ಕಂಬನಿ:ಸುಕ್ರಜ್ಜಿಯ ಅಗಲಿಕೆಯಿಂದ ಜಿಲ್ಲೆಯ ಜಾನಪದ ಲೋಕದ ಮೇರು ಕೊಂಡಿ ಕಳಚಿದಂತಾಗಿದೆ. ಸುಕ್ರಿ ಬೊಮ್ಮ ಗೌಡ ನಿಧನಕ್ಕೆ ಜಿಲ್ಲೆಯ ಅನೇಕ ಗಣ್ಯರು, ಸಾಹಿತಿಗಳು, ಜಾನಪದ ಕಲಾವಿದರು, ಜನಸಾಮಾನ್ಯರು ಕಂಬನಿ ಮಿಡಿದಿದ್ದಾರೆ.
ಇನ್ನು ಇತ್ತೀಚೆಗೆ ಹಾಲಕ್ಕಿ ಒಕ್ಕಲಿಗ ಸಮುದಾಯದವರೇ ಆಗಿದ್ದ ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಕೂಡ ನಿಧನರಾಗಿದ್ದರು. ಅಕ್ಕತಂಗಿಯರಂತೆ ಇದ್ದ ಇಬ್ಬರು ಹಾಲಕ್ಕಿ ಸಮುದಾಯದಲ್ಲಿ ಪದ್ಮಶ್ರೀ ಪುರಸ್ಕೃತರಾಗಿ ಸಮುದಾಯದಲ್ಲಿ ಕಳಸಪ್ರಾಯದಂತಿದ್ದರು.
ಇದನ್ನೂ ಓದಿ:ಗಿಡ-ಮರದ ಜೊತೆಯೇ ಸಖ್ಯ; ಕಾಡಿನ ರಕ್ಷಣೆಗೆ ನಿಂತಿದ್ದ ವೃಕ್ಷಮಾತೆ ತುಳಸಿಗೌಡ ಬದುಕಿನ ಹಾದಿ ಹೀಗಿತ್ತು