ಗಂಗಾವತಿ(ಕೊಪ್ಪಳ): ಬುಧವಾರ ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಗಂಗಾವತಿ ನಗರ ಸೇರಿದಂತೆ ಗ್ರಾಮೀಣ ಭಾಗದ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಳೆ ನೀರಿನಿಂದ ಅಪಾರ ಪ್ರಮಾಣದ ಭತ್ತದ ಬೆಳೆಯೂ ನಾಶವಾಗಿದೆ.
ತಾಲೂಕಿನ ಗ್ರಾಮೀಣ ಭಾಗದಲ್ಲಿ ಈಗಷ್ಟೇ ಭತ್ತ ನಾಟಿ ಮಾಡಿದ್ದ ಸಾವಿರಾರು ಎಕರೆ ಗದ್ದೆಗಳಲ್ಲಿ ಮಳೆ ನೀರು ನಿಂತಿದೆ. ಸಸಿಮಡಿಗಳು ರಭಸಕ್ಕೆ ಕೊಚ್ಚಿ ಹೋಗಿವೆ. ಆನೆಗೊಂದಿ, ಮಲ್ಲಾಪುರ, ಸಣಾಪುರ, ರಾಂಪೂರ, ಸಂಗಾಪುರ, ಕಣಿವೆ ಆಂಜನೇಯ ದೇಗುಲ, ಗಂಗಾವತಿ, ಅಯೋಧ್ಯೆ, ಢಣಾಪುರ, ಚಿಕ್ಕಜಂತಕಲ್, ಬಸವಪಟ್ಟಣ, ವಡ್ಡರಹಟ್ಟಿ, ಮರಳಿ, ಕಲ್ಗುಡಿ ಸೇರಿದಂತೆ ಹಲವೆಡೆ ಭತ್ತದ ಗದ್ದೆಗಳು ಜಲಾವೃತವಾಗಿವೆ.
ರಾತ್ರಿ 11 ಗಂಟೆಯಿಂದ ಆರಂಭವಾದ ಮಳೆ ಬೆಳಗಿನ ಜಾವ ಮೂರು ಗಂಟೆಯವರೆಗೂ ನಿರಂತರವಾಗಿ ಸುರಿದಿದೆ. ಹೀಗಾಗಿ ಗಂಗಾವತಿ ನಗರದ ಸುತ್ತಲ ಬೆಟ್ಟದ ಪ್ರದೇಶದಿಂದ ಅಪಾರ ಪ್ರಮಾಣದ ಮಳೆ ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿದೆ.
ನಗರದ ಕಿಲ್ಲಾ, ಹಿರೇಜಂತಕಲ್, ಮೆಹಬೂಬನಗರ, ಅಂಗಡಿಸಂಗಣ್ಣ ಕ್ಯಾಂಪ್, ರಾಮಲಿಂಗೇಶ್ವರಕ್ಯಾಂಪ್, ನೀಲಕಂಠೇಶ್ವರ ಕ್ಯಾಂಪ್, ಎಚ್ಆರ್ಎಸ್ ಕಾಲೊನಿ, ಗೌಸಿಯಾ ಕಾಲೊನಿ ಸೇರಿದಂತೆ ಕೊಳಚೆ ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಧವಸ-ಧಾನ್ಯಗಳಿಗೆ ಹಾನಿಯಾಗಿದೆ ಎಂಬ ಮಾಹಿತಿ ಲಭಿಸಿದೆ.
ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ನಂಬರ್ 19 ಕೋಚ್ಚಿ ಹೋಗಿರುವ ಕಾರಣಕ್ಕೆ ಜಲಾಶಯದ ಭದ್ರತೆಯ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಎಸ್ಕೇಪ್ ಚಾನಲ್ ಮೂಲಕ ಹರಿಸಿದ್ದು, ಅಪಾರ ಪ್ರಮಾಣದ ನೀರು ಗಂಗಾವತಿ ನಗರ ಪ್ರದೇಶಕ್ಕೆ ನುಗ್ಗಿದೆ. ದುರುಗಮ್ಮನ ಹಳ್ಳ ತುಂಬಿ ಹರಿಯುತ್ತಿದ್ದು, ಸಮೀಪದ ರಸ್ತೆಗಳು ಜಲಾವೃತವಾಗಿವೆ.