ಹಾವೇರಿ: ಅತ್ಯಂತ ಪ್ರೀತಿಯಿಂದ ಮನೆಯ ಸದಸ್ಯನಂತೆ ಸಾಕಿರುವ ಶ್ವಾನಕ್ಕೆ ಇಲ್ಲೊಂದು ಕುಟುಂಬ ಸೀಮಂತ ಕಾರ್ಯಕ್ರಮ ಮಾಡುವ ಮೂಲಕ ಗಮನ ಸೆಳೆದಿದೆ. ಹೌದು, ಹಾನಗಲ್ ತಾಲೂಕು ಅಕ್ಕಿಆಲೂರಿನ ಅಕ್ಕಿಆಲೂರ ಗ್ರಾಮದ ಟೋಪಿ ಅಜ್ಜನ ಮನೆಯ ಕರಬಸಪ್ಪ ಗೊಂದಿ ಕುಟುಂಬದವರು ತಾವು ಸಾಕಿರುವ ರಿಧಿ ಎಂಬ ಹೆಸರಿನ ನಾಯಿಗೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ.
ಶಾಸ್ತ್ರೋಕ್ತವಾಗಿ ಸೀಮಂತ:ಮುಂಜಾನೆ ರಿಧಿಗೆ ಸ್ನಾನ ಮಾಡಿಸಿ ಅದರ ಕಾಲುಗಳಿಗೆ ನೇಲ್ ಪಾಲಿಶ್ ಹಚ್ಚಿ. ಹೊಸ ಫ್ರಾಕ್ ತೊಡಿಸಿ ಮದುಮಗಳಂತೆ ಸಿಂಗಾರಗೊಳಿಸಲಾಗಿತ್ತು. ನಂತರ ನೆರೆಹೊರೆಯ ಮಹಿಳೆಯರು ಸೀಮಂತ ಕಾರ್ಯಕ್ರಮಕ್ಕೆ ಆಗಮಿಸಿ ರಿಧಿಗೆ ಕುಂಕುಮ ಅರಿಶಿಣ ಹಚ್ಚಿ ಆರತಿ ಬೆಳಗಿ, ಸೀರೆಯನ್ನು ರಿಧಿ ಮೇಲೆ ಹಾಕಿ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದರು.
ಇನ್ನು ಬೊಮ್ಮನಹಳ್ಳಿ ಗ್ರಾಮದ ಶ್ವಾನ ತರಬೇತುದಾರ ರಂಜಿತ್ ತಮ್ಮ ಶ್ವಾನ ಕಾಳಿಯನ್ನು ರಿಧಿ ಸೀಮಂತಕ್ಕೆ ಕರೆತಂದಿದ್ದರು ಈ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾಳಿ ಶ್ವಾನದಿಂದ ರಿಧಿ ಶ್ವಾನಕ್ಕೆ ಸೀರೆಯನ್ನು ನೀಡುವ ಮೂಲಕ ರಿಧಿ ಸೀಮಂತಕ್ಕೆ ಹಾರೈಸಿದರು. ಅಕ್ಕಪಕ್ಕದ ಶ್ವಾನಪ್ರೇಮಿಗಳೂ ಸಹ ತಮ್ಮ ಶ್ವಾನಗಳನ್ನು ರಿಧಿ ಸೀಮಂತಕ್ಕೆ ಕರೆತಂದಿದ್ದರು.
ಬೆರಗು ಮೂಡಿಸುವಂತಿತ್ತು ಸಿಂಗಾರ: ನಿಕ್ಕಿ ಮತ್ತು ಜ್ಯೂಲಿ ಶ್ವಾನಗಳನ್ನು ಸಹ ಸೀಮಂತ ಕಾರ್ಯಕ್ರಮಕ್ಕೆ ಸುಂದರವಾಗಿ ಸಿಂಗರಿಸಿ ಕರೆತರಲಾಗಿತ್ತು. ರಿಧಿ ಸಂಪೂರ್ಣ ಸಸ್ಯಹಾರಿಯಾಗಿದ್ದು ಸೀಮಂತ ಕಾರ್ಯಕ್ರಮದಲ್ಲಿ ಅದರ ನೆಚ್ಚಿನ ತಿನಿಸುಗಳಾದ ಚಕ್ಕಲಿ, ಶೇಂಗಾ ಚಕ್ಕಿ ಸೇರಿದಂತೆ ವಿವಿಧ ಆಹಾರಗಳನ್ನ ಇಡಲಾಗಿತ್ತು. ಸೀಮಂತ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ರಿಧಿ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು. ಕರಿಬಸಪ್ಪ ಗೊಂದಿ ಅವರು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.