ಮಂಗಳೂರು:ಸಾಕು ನಾಯಿಯನ್ನೇ ಎಳೆದೊಯ್ದು ತ್ಯಾಜ್ಯ ವಿಲೇವಾರಿ ವಾಹನಕ್ಕೆ ತುಂಬಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಾಯಿಯನ್ನು ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ತ್ಯಾಜ್ಯದೊಟ್ಟಿಗೆ ಹಾಕಿದ ವಿಡಿಯೋವೊಂದು ವೈರಲ್ ಆಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ನಗರದ ಡೊಂಗರಕೇರಿಯಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ. ಶ್ವಾನದ ಕುತ್ತಿಗೆಗೆ ಹಗ್ಗ ಕಟ್ಟಿ ಬಲವಂತವಾಗಿ ಎಳೆದೊಯ್ದು ಮಂಗಳೂರು ಮಹಾ ನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಕಸದ ವಾಹನಕ್ಕೆ ತುಂಬಿದ್ದರು. ಶ್ವಾನವು ಬೆದರಿ ಮುಂದಕ್ಕೆ ಹೋಗದೆ ಹಿಂದೆ ಜಗ್ಗುತ್ತಿದ್ದರೂ, ಮಹಿಳೆ ಸೇರಿದಂತೆ ಅಲ್ಲಿದ್ದವರು ಶ್ವಾನವನ್ನು ಬಲವಂತವಾಗಿ ಕಸದ ಲಾರಿಗೆ ತುಂಬಿಸಿ ಕಳುಹಿಸಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು.
ಕೃತ್ಯದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅಲ್ಲದೆ, ಅಲ್ಲಿರುವ ಫ್ಲ್ಯಾಟೊಂದರಲ್ಲಿ ಯಾರೋ ವಿಡಿಯೋ ಸೆರೆ ಹಿಡಿದಿದ್ದು, ವೈರಲ್ ಆಗಿತ್ತು. ಇದು ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಡೊಂಗರಕೇರಿ ಬಳಿಯ ಪಿಜಿಯೊಂದರಲ್ಲಿ ನಾಯಿಯನ್ನು ಸಾಕಿಕೊಂಡಿದ್ದರು ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ.
ಪಾಲಿಕೆ ಮೇಯರ್ ಹೇಳಿದ್ದೇನು:ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ''ಇದರ ಬಗ್ಗೆ ಗಮನಕ್ಕೆ ಬಂದ ಕೂಡಲೇ ತ್ಯಾಜ್ಯ ವಿಲೇವಾರಿ ಸಿಬ್ಬಂದಿಯನ್ನು ಕರೆಸಿಕೊಂಡು ವಿಚಾರಿಸಲಾಯಿತು. ಅವರು ತಮಗೆ ಈ ರೀತಿ ನಾಯಿಯನ್ನು ಕೊಂಡೊಯ್ಯಬಾರದೆಂದು ತಿಳಿದಿರಲಿಲ್ಲ. ತಮ್ಮಿಂದ ತಪ್ಪಾಗಿದೆ ಎಂದಿದ್ದಾರೆ. ಅವರಿಗೆ ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ'' ಎಂದು ತಿಳಿಸಿದರು.
ಇದನ್ನೂ ಓದಿ:ಸಹೋದರಿಯ ಮದುವೆ, ಕುಟುಂಬ ನಿರ್ವಹಣೆಗೆ ಗಾಂಜಾ ಮಾರಾಟಕ್ಕಿಳಿದವನ ಬಂಧನ - marijuana case