ಬೆಂಗಳೂರು:ದೇಶದ ಎಲ್ಲಾ ವಾಹನಗಳಿಗೆ ಒಂದೇ ಮಾದರಿಯ ನಾಮಫಲಕವಿರುವಂತೆ ಮಾಡಲು ಹಾಗೂ ಅಪರಾಧ ಪತ್ತೆ ಹಚ್ಚಲು ನೆರವಾಗುವ ಅತ್ಯಂತ ಸುರಕ್ಷತಾ ನೋಂದಣಿ ನಾಮಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸುವಂತೆ ಮೂರನೇ ಬಾರಿ ಗಡುವು ವಿಸ್ತರಿಸಿದರೂ ಸವಾರರಿಂದ ಸೂಕ್ತ ಸ್ಪಂದನೆ ವ್ಯಕ್ತವಾಗಿಲ್ಲ. ರಾಜ್ಯದ ವಾಹನ ಸವಾರರಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮೇ 31ರವರೆಗೆ ಗಡುವು ನೀಡಿ ಕಳೆದ ಫೆಬ್ರುವರಿಯಲ್ಲಿ ರಾಜ್ಯ ಸರ್ಕಾರ ಮೂರನೇ ಬಾರಿ ಆದೇಶ ಹೊರಡಿಸಿತ್ತು.
ಎಚ್‌ಎಸ್‌ಆರ್‌ಪಿ ಅಳವಡಿಸಿರುವ ವಾಹನಗಳ ಸಂಖ್ಯೆ ಎಷ್ಟು?: 2019 ಏಪ್ರಿಲ್ 1ರ ಮುನ್ನ ನೋಂದಣಿಯಾದ ಎಲ್ಲಾ ಮಾದರಿಯ ವಾಹನಗಳು ಹೊಸದಾಗಿರುವ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವಂತೆ ವಾಹನ ಸವಾರರಿಗೆ ಸೂಚಿಸಿತ್ತು. ಮಾಹಿತಿ ಕೊರತೆ, ವೆಬ್ ಪೋರ್ಟಲ್ನಲ್ಲಿ ಸರ್ವರ್ ತೊಂದರೆ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಸರ್ಕಾರವು ಗಡುವು ವಿಸ್ತರಿಸಿತ್ತು. 2 ಕೋಟಿ ವಾಹನಗಳ ಪೈಕಿ ಕೇವಲ 37.5 ಲಕ್ಷ ವಾಹನಗಳು ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿವೆ.
ಸಾರಿಗೆ ಇಲಾಖೆ ಹೇಳಿದ್ದೇನು?:ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಬೆಳಗಾವಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾದರೆ ಗದಗ, ಕೊಪ್ಪಳ, ಹಾವೇರಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ನಂಬರ್ ಪ್ಲೇಟ್ ನೋಂದಣಿಯಾಗಿವೆ. ಈ ಬಗ್ಗೆ ಸೂಕ್ತ ಮಾಹಿತಿ ಹಾಗೂ ತಿಳುವಳಿಕೆ ಮೂಡಿಸಿದರೂ ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಿಲ್ಲ. ಅಂತಿಮ ದಿನವಾದ ಮೇ 31ರ ಬಳಿಕ ಗಡುವು ವಿಸ್ತರಣೆ ಮುಂದುವರೆಸಿದರೆ ಇನ್ನಷ್ಟು ಜಾಗೃತಿ ಮೂಡಿಸುತ್ತೇವೆ. ಒಂದು ವೇಳೆ ಕಾಲಾವಕಾಶ ವಿಸ್ತರಿಸದಿದ್ದಲ್ಲಿ ದಂಡ ವಿಧಿಸುತ್ತೇವೆ ಎಂದು 'ಈಟಿವಿ ಭಾರತ್'ಗೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೆ ಗಡುವು ವಿಸ್ತರಣೆ ಅನುಮಾನ:ನಂಬರ್ ಪ್ಲೇಟ್ ಅಳವಡಿಕೆ ವಿಚಾರವಾಗಿ ಮೂರು ಬಾರಿ ಗಡುವು ವಿಸ್ತರಿಸಿದರೂ ಗಂಭೀರವಾಗಿ ವಾಹನ ಸವಾರರು ಪರಿಗಣಿಸಿಲ್ಲ. ಸರ್ಕಾರಕ್ಕೆ ಪತ್ರ ಬರೆದಿರುವ ಸಾರಿಗೆ ಇಲಾಖೆ, ಮೇ 31ರ ಬಳಿಕ ಕೈಗೊಳ್ಳಬೇಕಾದ ನಿಲುವಿನ ಬಗ್ಗೆ ತಿಳಿಸುವಂತೆ ಮನವಿ ಮಾಡಲಾಗಿದೆ. ಈ ಬಾರಿ ಗಡುವು ವಿಸ್ತರಣೆ ಮಾಡುವುದು ಬಹುತೇಕ ಅನುಮಾನ ಎನ್ನಲಾಗಿದೆ. ದಂಡ ಪ್ರಯೋಗ ಮಾಡಿದಾಗ ಮಾತ್ರ ಸವಾರರು ಎಚ್ಚೆತ್ತುಕೊಳ್ಳುವ ಆಶಾಭಾವನೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.