ಮಂಗಳೂರು: ತಾಯಿ ಎಂದರೆ ಮಕ್ಕಳಿಗೆ ಕಣ್ಣಿಗೆ ಕಾಣುವ ಏಕೈಕ ದೇವರು. ಅಮ್ಮನಿಗೆ ಸಮಸ್ಯೆಯಾದರೆ ಮಕ್ಕಳಿಗೆ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ಇದೇ ರೀತಿ ತನ್ನ ತಾಯಿಗೆ ಫೈಲೇರಿಯಾಸಿಸ್ ಆಗಲು ಕಾರಣವಾಗಿದ್ದ ಸೊಳ್ಳೆ ನಿರ್ನಾಮಕ್ಕೆ ಪಣ ತೊಟ್ಟ ವ್ಯಕ್ತಿ ಇದೀಗ ಸೊಳ್ಳೆಯನ್ನು ಸೆರೆ ಹಿಡಿದು ಸಾಯಿಸುವ ಯಂತ್ರವೊಂದನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಕಾರದಲ್ಲಿ ಗುಡ್ನೈಟ್ ಲಿಕ್ವಿಡ್ನ ಗಾತ್ರಕ್ಕಿಂತ ತುಸು ದೊಡ್ಡದಾಗಿರುವ ಇದು ಮೊಝಿಕ್ವಿಟ್. ಇದಕ್ಕೆ ಯಾವುದೇ ಲಿಕ್ವಿಡ್ ಹಾಕಬೇಕಿಲ್ಲ. ವಿದ್ಯುತ್ಗೆ ಸಂಪರ್ಕಿಸಿದರೆ ಮನೆಯಲ್ಲಿ ಓಡಾಡಿಕೊಂಡಿರುವ ಸೊಳ್ಳೆಗಳು ಇದಕ್ಕೆ ಬಂದು ಬೀಳುತ್ತವೆ. ಸೊಳ್ಳೆ ಇದರೊಳಗೆ ಸಿಲುಕಿಕೊಂಡು ಸಾಯುತ್ತವೆ. ಇಂತಹ ಒಂದು ಯಂತ್ರ ತಯಾರಿಸಿದವರು ಮಂಗಳೂರಿನ ಕೊಟ್ಟಾರದ ಓರ್ವಿನ್ ನೊರೊನ್ಹಾ. ತಮ್ಮ 20 ವರ್ಷಗಳ ಸಂಶೋಧನೆಯಲ್ಲಿ ಅವರು ಈ ಯಂತ್ರವನ್ನು ಹೊರ ತಂದಿದ್ದಾರೆ.
ಓರ್ವಿನ್ ನೊರೊನ್ಹಾ ಅವರ ತಾಯಿಗೆ ಫೈಲೇರಿಯಾಸಿಸ್ ಬಂದು ಕಾಲು ಊದಿಕೊಂಡಿತ್ತು. ಇದಕ್ಕೆ ಸೊಳ್ಳೆ ಕಚ್ಚಿದ್ದೇ ಕಾರಣವಾಗಿತ್ತು. ಇದನ್ನು ಸಣ್ಣ ವಯಸ್ಸಿನಲ್ಲಿ ಅರಿತ ಓರ್ವಿನ್ ನೊರೊನ್ಹಾ ಅವರು ಸೊಳ್ಳೆ ನಿರ್ಮೂಲನೆ ಗುರಿ ಇಟ್ಟುಕೊಂಡಿದ್ದರು. 2001ರಲ್ಲಿ ಹೈದರಾಬಾದ್ನಲ್ಲಿ ಅಮೆರಿಕದ ಮೊಸ್ಕಿಟೋ ಮ್ಯಾಗ್ನೆಟ್ ಎಂಬ ಯಂತ್ರವನ್ನು ನೋಡಿದ್ದರು. ಅದಕ್ಕೆ ಸುಮಾರು 1.10 ಲಕ್ಷ ರೂ. ಖರ್ಚು ಮತ್ತು ನಿರ್ವಹಣೆಗೆ ಪ್ರತಿ ತಿಂಗಳು 5 ಸಾವಿರ ರೂ. ವ್ಯಯಿಸಬೇಕಿತ್ತು. ಅಷ್ಟು ಮಾತ್ರವಲ್ಲದೇ ಅದಕ್ಕೆ ಬೇಕಾದ ವಸ್ತುಗಳು ಭಾರತದಲ್ಲಿ ಲಭ್ಯವಿರಲಿಲ್ಲ. ಇದನ್ನು ನೋಡಿದ ಓರ್ವಿನ್ ಅವರು ಕಡಿಮೆ ಖರ್ಚಿನಲ್ಲಿ ಸೊಳ್ಳೆ ಸೆರೆ ಹಿಡಿಯುವ ಯಂತ್ರವನ್ನು ತಯಾರಿಸಿದ್ದಾರೆ.
ಕಾರ್ಯ ನಿರ್ವಹಣೆ ಹೇಗೆ?:ಕಿರಿದಾದ ಗಾತ್ರ ಹೊಂದಿರುವ ಈ ವಿದ್ಯುತ್ ಚಾಲಿತ ಯಂತ್ರವನ್ನು ಪ್ಲಾಸ್ಟಿಕ್ನಿಂದ ಮಾಡಲಾಗಿದೆ. ಯಂತ್ರ ತಯಾರಿಕೆಯ ವೇಳೆ ಇವರೇ ತಯಾರಿಸಿದ ಫುಡ್ ಗ್ರೇಡ್ ಪುಡಿಯನ್ನು ಯಂತ್ರದ ಹೊರಭಾಗದಲ್ಲಿರುವ ಪ್ಲಾಸ್ಟಿಕ್ ಉತ್ಪನ್ನದ ಮೇಲೆ ಮಿಶ್ರಣ ಮಾಡಿ ಹಾಕಲಾಗುತ್ತದೆ. ವಿದ್ಯುತ್ ಸಂಪರ್ಕ ಮಾಡಿದಾಗ ಯಂತ್ರದ ಒಳಗಿರುವ ಮೋಟಾರ್ ತಿರುಗುತ್ತದೆ. ಆಗ ಯಂತ್ರ ಹೊರಸೂಸುವ ಬೆಳಕು ಸೊಳ್ಳೆಗಳನ್ನು ಆಕರ್ಷಿಸುತ್ತದೆ. ಮೋಟಾರ್ ಫ್ಯಾನ್ ಸೊಳ್ಳೆಯನ್ನು ತಮ್ಮ ಯಂತ್ರದತ್ತ ಎಳೆಯುತ್ತದೆ. ಆಗ ಆ ಸೊಳ್ಳೆಯು ಸೊಳ್ಳೆ ಸಂಗ್ರಹದ ಕಂಟೈನರ್ನಲ್ಲಿ ಸಿಲುಕುತ್ತವೆ. ಸ್ವಲ್ಪ ಸಮಯದ ಬಳಿಕ ಡಿಹೈಡ್ರೇಶನ್, ಆಹಾರ ಸಿಗದ ಕಾರಣ ಸತ್ತು ಹೋಗುತ್ತವೆ. ಈ ಯಂತ್ರದೊಳಗೆ ಸಿಲುಕುವ ಸೊಳ್ಳೆಗಳ ದೇಹದ ಯಾವುದೇ ಭಾಗಗಗಳು ಬೇರ್ಪಡುವುದಿಲ್ಲ.