ಮಧುಗಿರಿ (ತುಮಕೂರು) : ಸರಿಗಮಪ ಖ್ಯಾತಿಯ ಮಂಜಮ್ಮ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಮಧುಗಿರಿ ತಾಲೂಕಿನ ಕಸಬಾ ವ್ಯಾಪ್ತಿಯ ಡಿವಿ ಹಳ್ಳಿ ಗ್ರಾಮದಲ್ಲಿ ಮಂಜಮ್ಮ ವಾಸಿಸುತ್ತಿದ್ದರು. ಅಂಧ ಗಾಯಕಿಯರಾಗಿ ಮಂಜಮ್ಮ, ರತ್ನಮ್ಮ ಗುರುತಿಸಿಕೊಂಡಿದ್ದರು. ಅನಾರೋಗ್ಯ ಹಿನ್ನೆಲೆ ಮಂಜಮ್ಮ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಮೊದಲು ದಂಡಿ ಮಾರಮ್ಮ ದೇವಸ್ಥಾನದೆದುರು ದಂಡಿ ಮಾರಮ್ಮನ ಹಾಡುಗಳನ್ನು ಹೇಳುತ್ತಿದ್ದರು. ಇದರಿಂದ ಗುರುತಿಸಲ್ಪಟ್ಟ ಅವರು 2018ರಲ್ಲಿ ಸರಿಗಮಪ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದರು. ಕಾರ್ಯಕ್ರಮದಲ್ಲಿ ಹಾಜರಿದ್ದ ನಟ ಜಗ್ಗೇಶ್, ಮಂಜಮ್ಮ ಅವರಿಗೆ ವಾಸಕ್ಕೆ ಯೋಗ್ಯ ಮನೆ ಇಲ್ಲದಿರುವುದನ್ನು ಮನಗಂಡರು. 2019ರಲ್ಲಿ ತಮ್ಮ ಸ್ವಂತ ಹಣದಿಂದ ಮನೆ ನಿರ್ಮಾಣ ಮಾಡಿಕೊಟ್ಟಿದ್ದರು. ಗೃಹಪ್ರವೇಶ ಕಾರ್ಯಕ್ರಮಕ್ಕೆ ಜಗ್ಗೇಶ್ ದಂಪತಿ ಆಗಮಿಸಿದ್ದರು.
ಇದನ್ನೂ ಓದಿ: ಮಹೇಶ್ ಬಾಬು ರಾಜಮೌಳಿ ಸಿನಿಮಾ: ತಂಡದವರಿಗೆ ಕಂಡೀಷನ್ಸ್ ಅಪ್ಲೈ; ಏನದು?
ಅಂಧಗಾಯಕಿಯರ ನಿವಾಸಕ್ಕೆ ಪರಿಮಳ ಜಗ್ಗೇಶ್ ನಿಲಯ ಎಂದು ಹೆಸರಿಟ್ಟಿದ್ದರು. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಂಜಮ್ಮ ಮತ್ತು ರತ್ನಮ್ಮ ಅವರಿಗೆ ಪ್ರತೀ ದಿನಕ್ಕೆ ಬೇಕಾದ ಅಕ್ಕಿ ಬೇಳೆ ಸೇರಿದಂತೆ ಆಹಾರ ಪದಾರ್ಥಗಳನ್ನು ಪ್ರತೀ ತಿಂಗಳು ಕಳುಹಿಸಿಕೊಡುತ್ತಿದ್ದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಬೆನ್ನಲ್ಲೇ ಶಿವರಾಜ್ಕುಮಾರ್ ಭೇಟಿಯಾದ ಡಾಲಿ ಧನಂಜಯ್ - ಫೋಟೋ ಇಲ್ಲಿದೆ
ಮೃತ ಮಂಜಮ್ಮನಿಗೆ ತಂದೆ ಹಾಗೂ ಇಬ್ಬರು ತಂಗಿಯರಿದ್ದು, ಅಣ್ಣ ಮತ್ತು ಅಂಧಳಾಗಿದ್ದ ಅಕ್ಕ ಈ ಮುಂಚೆಯೇ ಮೃತಪಟ್ಟಿದ್ದಾರೆ. ಹಾಡುಗಳನ್ನು ಹೇಳಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಅಂಧಗಾಯಕಿ ಮಂಜಮ್ಮ ಕೂಡಾ ಇದೀಗ ಕೊನೆಯುಸಿರೆಳೆದಿದ್ದಾರೆ. ಇವರು ಮೃತಪಟ್ಟ ಹಿನ್ನೆಲೆ ವಯಸ್ಸಾದ ಅಪ್ಪ, ಅಂಧಗಾಯಕಿ ರತ್ನಮ್ಮ, ಮತ್ತೋರ್ವ ತಂಗಿ ರಂಗಲಕ್ಷ್ಮಿ ಕುಟುಂಬ ಕಂಗಾಲಾಗಿದೆ.