ಬೆಂಗಳೂರು: ಬೆಂಗಳೂರಿಗರಿಗೆ ನೀರಿನ ದರ ಏರಿಕೆಯ ಬಿಸಿ ಸದ್ಯದಲ್ಲೇ ತಟ್ಟಲಿದೆ. ಈ ಬಗ್ಗೆ ಮುನ್ಸೂಚನೆ ನೀಡಿರುವ ಡಿಸಿಎಂ ಡಿ. ಕೆ. ಶಿವಕುಮಾರ್, ಜನರಿಗೆ ಹೆಚ್ಚು ಭಾರ ಆಗದಂತೆ ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ಬೆಂಗಳೂರು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾವೇರಿ ಭವನದಲ್ಲಿ ಬಿಬಿಎಂಪಿ, ಜಲಮಂಡಳಿ, ಬಿಡಿಎ, ಬಿಎಂಆರ್ ಸಿಎಲ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2014 ರಿಂದ 2024ರ ವರೆಗೆ ಸುಮಾರು 11 ವರ್ಷದಿಂದ ನೀರಿನ ದರ ಹೆಚ್ಚಿಸಿಲ್ಲ. ಬೆಂಗಳೂರು ಜಲಮಂಡಳಿ ವಾರ್ಷಿಕ ಒಂದು ಸಾವಿರ ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ವಿದ್ಯುತ್ ಬಿಲ್ ಹಿಂದೆ 35 ಕೋಟಿ ಇತ್ತು. ಈಗ 75 ಕೋಟಿ ರೂ. ಆಗುತ್ತಿದೆ. ಎಲ್ಲ ವೆಚ್ಚ ಸೇರಿ ಸುಮಾರು 85 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗುತ್ತಿದೆ ಎಂದು ತಿಳಿಸಿದರು.
ದರ ಏರಿಕೆಯ ಅನಿವಾರ್ಯತೆ ಇದೆ. ಬೆಂಗಳೂರಿನ ಶಾಸಕರಿಗೆ ಜಲಮಂಡಳಿ ಅಧಿಕಾರಿಗಳು ದರ ಏರಿಕೆ ಅನಿವಾರ್ಯತೆ ಬಗ್ಗೆ ಮನವಿ ಮಾಡಿದ್ದಾರೆ. ಸಂಬಳಕ್ಕೆ ಹಣ ಇಲ್ಲ, ತೊಂದರೆ ಆಗುತ್ತಿದೆ. ಬ್ಯಾಂಕ್ಗಳು, ಹಣಕಾಸು ಸಂಸ್ಥೆಯವರು ನೀವು ನಷ್ಟದಲ್ಲಿ ಇದ್ದೀರ ಅಂತ ಸಾಲ ಕೊಡುತ್ತಿಲ್ಲ. ಒಂದು ಸಾವಿರ ಕೋಟಿ ರೂ. ನಷ್ಟವನ್ನು ನಿಭಾಯಿಸಬೇಕಾಗಿದೆ. ಇನ್ನೂ ತೀರ್ಮಾನ ಆಗಿಲ್ಲ. ದರ ಏರಿಕೆಯ ಪ್ರಸ್ತಾವನೆ ಸಿದ್ಧಪಡಿಸಲು ಸೂಚನೆ ನೀಡಿದ್ದೇನೆ. ಸದ್ಯಕ್ಕೆ ಜಲಮಂಡಳಿಗೆ ಪ್ರಸ್ತಾವನೆ ನೀಡಲು ಹೇಳಿದ್ದೇನೆ. ಜನರಿಗೂ ಭಾರ ಆಗಬಾರದು, ಸಂಸ್ಥೆಯೂ ನಡೆಯಬೇಕು ಎಂದು ಡಿಸಿಎಂ ಸಮಜಾಯಿಷಿ ನೀಡಿದರು.
ಪ್ರತಿ ಲೀಟರ್ ನೀರಿಗೆ ಒಂದು ಪೈಸೆ ದರ : ಸ್ಲಂ ನಿವಾಸಿಗಳಿಗೂ ಪ್ರತಿ ಲೀಟರ್ ನೀರಿಗೆ ಒಂದು ಪೈಸೆ ದರ ನಿಗದಿ ಮಾಡಲು ಯೋಚಿಸಲಾಗಿದೆ. ಬಡವರೆಲ್ಲರೂ ಒಂದು ಪೈಸೆಯಾದರು ಪ್ರತಿ ಲೀಟರ್ಗೆ ಹಣ ಕೊಡಬೇಕು. ನೀರು ಬಳಸುವ ಎಲ್ಲರೂ ಲೆಕ್ಕಕ್ಕೆ ಸಿಗಲಿ ಅಂತ ಒಂದು ಪೈಸೆಯಾದರು ಹಣ ಕೊಡಬೇಕು. ಬಡವರು ಹೆಚ್ಚು ಹಣ ನೀಡಲು ಆಗದಿದ್ದರೆ ಒಂದು ಲೀಟರ್ಗೆ ಒಂದು ಪೈಸೆಯಾದರೂ ನೀಡಲಿ ಎಂಬುದು ನಮ್ಮ ಅಭಿಲಾಷೆ. ಸ್ಲಂಗಳಲ್ಲಿ ಉಚಿತವಾಗಿ ಕೊಡುವ ನೀರನ್ನು ಅಕ್ರಮವಾಗಿ ಹೋಟೆಲ್ ನವರು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದಾರೆ ಎಂದು ತಿಳಿಸಿದರು.
ಎಲ್ಲರೂ ಪ್ರತಿ ಲೀಟರ್ಗೆ ಒಂದೆರಡು ಪೈಸೆ ಕೊಡಬೇಕು. ಅಕ್ರಮ ನೀರಿನ ಸಂಪರ್ಕ ಹೊಂದಿರುವವರು ಸಕ್ರಮ ಮಾಡುವ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳಿಗೆ ಒಂದು ವರದಿ ನೀಡಲು ಹೇಳಿದ್ದೇನೆ. ಕೂಡಲೇ ಕೆಲ ತೀರ್ಮಾನ ಕೈಗೊಳ್ಳಲಾಗುವುದು. ಬಡವರಿಗೆ ಉಚಿತ ನೀರು ಕೊಟ್ಟರೂ ಅದು ನಮ್ಮ ಖಾತೆಗೆ ಬರಬೇಕು. ಒಂದು ಪೈಸೆಯಾದರು ಕೊಟ್ಟು ಅವರು ನಮ್ಮ ಲೆಕ್ಕಕ್ಕೆ ಬರಬೇಕು. ಯಾರು ಎಷ್ಟು ನೀರು ಬಳಸುತ್ತಿದ್ದಾರೆ ಎಂಬುದು ಲೆಕ್ಕಕ್ಕೆ ಸಿಗಬೇಕು. ಇದಕ್ಕಾಗಿ ಉಚಿತವಾಗಿ ನೀರು ಪಡೆಯುವವರಿಗೂ ಪ್ರತಿ ಲೀಟರ್ಗೆ ಒಂದು ಪೈಸೆ ದರ ನಿಗದಿಗೆ ಚಿಂತಿಸಲಾಗಿದೆ ಎಂದರು.
ಎಷ್ಟು ದಿನ ಅಂತ ಉಚಿವಾಗಿ ನಡೆಸಲು ಆಗುತ್ತೆ? ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಉಚಿತವಾಗಿ ನೀಡುತ್ತಿರುವ ಬಗ್ಗೆನೂ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲವನ್ನೂ ಎಷ್ಟು ದಿನ ಅಂತ ಉಚಿತವಾಗಿ ನಡೆಸಲು ಆಗುತ್ತೆ ಎಂದು ಪ್ರಶ್ನಿಸಿದರು. ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಗಿದೆ. ಬಳಿಕ ಎಲ್ಲಾ ಬೆಲೆ ಏರಿಕೆಯಾಗುತ್ತಿದೆ. ವಿದ್ಯುತ್ ದರ ಹೆಚ್ಚು ಆಗುತ್ತಲೇ ಇದೆ. ಸಂಬಳ 10% ಹೆಚ್ಚಳ ಮಾಡಿದ್ದೇವೆ. ಎಲ್ಲವನ್ನೂ ಎಷ್ಟು ದಿನ ಅಂತ ಉಚಿತವಾಗಿ ನಡೆಸಲು ಆಗುತ್ತೆ. ನಡೆಸಲು ಆಗುತ್ತಿಲ್ಲ. ಸಂಬಳ ಕೊಡುತ್ತಿಲ್ಲ ಅಂತ ಜಗಳ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಜೈಕಾ (ಜಪಾನ್ ಇಂಟರ್ ನ್ಯಾಷನಲ್ ಕೋ ಅಪರೇಶನ್ ಏಜೆನ್ಸಿ) ಅವರು ದುಡ್ಡು ಕೊಡಬೇಕಾದರೆ ಸರ್ಕಾರದ ಖಾತ್ರಿ ಕೇಳುತ್ತಿದ್ದಾರೆ. ಬಿಬಿಎಂಪಿ ಮಾದರಿಯಲ್ಲಿ ನೀರಿನ ಬಿಲ್ ಬಾಕಿ ಉಳಿಸಿಕೊಂಡವರಿಗೆ ಒಟಿಎಸ್ ಕೊಡಲು ಚಿಂತನೆ ಇದೆ. ಬೆಂಗಳೂರಲ್ಲಿ ಬೇಸಿಗೆ ವೇಳೆ ನೀರಿನ ಸಮಸ್ಯೆ ಆಗದಂತೆ ಈಗಿನಿಂದಲೇ ಸಿದ್ಧತೆ ನಡೆಸುತ್ತಿದ್ದೇವೆ. ನೀರಿನ ಸಮಸ್ಯೆ ಆಗದಂತೆ ಕೆರೆ ನೀರು ತುಂಬಿಸಿ, ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇವೆ ಎಂದರು.
ಅಪಾರ್ಟ್ಮೆಂಟ್ ನವರು ಕಡ್ಡಾಯವಾಗಿ ಕಾವೇರಿ ನೀರು ಸಂಪರ್ಕ ಪಡೆಯಬೇಕು : ಕಾವೇರಿ 5ನೇ ಹಂತ ಯೋಜನೆ ಪೂರ್ಣವಾಗಿದೆ. ಈಗಾಗಲೇ 15 ಸಾವಿರ ಜನ ನೀರಿನ ಸಂಪರ್ಕ ಪಡೆದಿದ್ದಾರೆ. ಇನ್ನೂ 20 ಸಾವಿರ ಜನ ನೀರಿನ ಸಂಪರ್ಕ ಪಡೆಯಬೇಕಾಗಿದೆ. ಸುಮಾರು ಅಪಾರ್ಟ್ಮೆಂಟ್ಗಳು ಕಾವೇರಿ ನೀರಿನ ಸಂಪರ್ಕ ತೆಗೆದುಕೊಳ್ಳುತ್ತಿಲ್ಲ. ಅವರು ಕಡ್ಡಾಯವಾಗಿ ನೀರಿನ ಸಂಪರ್ಕ ತೆಗೆದುಕೊಳ್ಳಬೇಕು. ನಾವು ಅಷ್ಟೊಂದು ಹಣ ಖರ್ಚು ಮಾಡಿದ್ದೇವೆ. ಆದರೆ ಅಪಾರ್ಟ್ಮೆಂಟ್ ನವರು ಬೇರೆ ರೂಪದಲ್ಲಿ ನೀರು ತಗೊಳುತ್ತಿದ್ದಾರೆ. ಠೇವಣಿ ಕಟ್ಟಬೇಕು, ಸೇವಾ ಶುಲ್ಕು ಕಟ್ಟ ಬೇಕು ಅಂತ ಅಪಾರ್ಟ್ಮೆಂಟ್ ನವರು ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದಿದ್ದಾರೆ. ಇದನ್ನು ತಡೆಗಟ್ಟಲು ಸೂಚನೆ ನೀಡಲಾಗಿದೆ. ಪ್ರತಿಯೊಂದು ಮನೆ, ಅಪಾರ್ಟ್ಮೆಂಟ್ಗಳಿಗೆ ಹೋಗಿ ಕಾವೇರಿ ನೀರಿನ ಸಂಪರ್ಕ ತೆಗೆದುಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಮೂರುವರೆ ವರ್ಷದಲ್ಲಿ ಟನೆಲ್ ಯೋಜನೆ ಪೂರ್ಣಗೊಳಿಸಲು ಸೂಚನೆ : ಸುರಂಗ ರಸ್ತೆ ನಿರ್ಮಾಣಕ್ಕಾಗಿ ರೂ. 17,780 ಕೋಟಿ ಮೊತ್ತದ ಟೆಂಡರ್ ಅನ್ನು ಫೆಬ್ರವರಿ ಅತ್ಯಂದ ವೇಳೆಗೆ ಕರೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜೊತೆಗೆ ಮೂರುವರೆ ವರ್ಷಗಳ ಒಳಗಾಗಿ ಮುಗಿಯಬೇಕು ಎಂದು ತಿಳಿಸಿದ್ದೇನೆ. ಎರಡು ಹಂತದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು. ಬಿಬಿಎಂಪಿಯಿಂದಲೂ ಹಣ ನೀಡಲಾಗುವುದು. ಸರ್ಕಾರದಿಂದಲೂ ಅನುದಾನ ನೀಡಲಾಗುವುದು. ಪವರ್ ಫೈನಾನ್ಸ್ ಕಾರ್ಪೋರೇಷನ್, ಹುಡ್ಕೋ ಸೇರಿದಂತೆ ಒಂದಷ್ಟು ಬ್ಯಾಂಕ್ಗಳು ಸಾಲ ನೀಡಲು ಮುಂದೆ ಬಂದಿವೆ. ಇದಕ್ಕೂ ಹರಾಜು ಪ್ರಕ್ರಿಯೆ ಕರೆಯಲಾಗಿದೆ. ಯಾರು ಕಡಿಮೆ ಬಡ್ಡಿದರಕ್ಕೆ ಹಣ ನೀಡುತ್ತಾರೋ ಅವರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಕ್ರಾಂತಿಕಾರಕ ವ್ಯವಸ್ಥೆ ಬೆಂಗಳೂರಲ್ಲಿ ಬರಲಿದೆ : ಬೆಂಗಳೂರಿನಲ್ಲಿ ಇ ಖಾತಾ ಹೊಂದಿಲ್ಲದ ಆಸ್ತಿಗಳಿಗೆ ಬಿ ಖಾತೆ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಇಡೀ ದೇಶದಲ್ಲಿಯೇ ಇಲ್ಲದ ಕ್ರಾಂತಿಕಾರಕ ವ್ಯವಸ್ಥೆ ಬೆಂಗಳೂರಿನಲ್ಲಿ ಬರಲಿದೆ. ಮುಂದಿನ ವಾರದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಎಲ್ಲ ಸಂಸ್ಥೆಗಳಲ್ಲೂ ಕನ್ನಡ ಬಾವುಟ ಹಾರಾಟ ಕಡ್ಡಾಯ ಮಾಡುತ್ತೇವೆ: ಡಿ.ಕೆ. ಶಿವಕುಮಾರ್
ಇದನ್ನೂ ಓದಿ: ಖಾತಾ ಇಲ್ಲದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಇ - ಖಾತಾ ಇಲ್ಲದ ಎಲ್ಲಾ ಆಸ್ತಿಗಳಿಗೂ ಬಿ - ಖಾತಾ ನೀಡಲು ಸೂಚನೆ