ಬೆಂಗಳೂರು :ಹಾಸನ ಪ್ರಕರಣವನ್ನು ಕಾಂಗ್ರೆಸ್ ನಾಯಕರು ಮಾನಿಟರ್ ಮಾಡುತ್ತಿದ್ದಾರೆ. ರೇವಣ್ಣ ಅವರನ್ನು ಜೈಲಿಗೆ ಕಳುಹಿಸಲೇಬೇಕು ಎಂದು ಕುತಂತ್ರ ಮಾಡಿದ್ದಾರೆ. ಈ ಪ್ರಕರಣವನ್ನು ಪಶ್ಚಿಮ ಬಂಗಾಳದ ಘಟನೆಗೆ ಟ್ಯಾಗ್ ಮಾಡಬೇಕು. ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶ ಇದರ ಹಿಂದಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕ ಹೆಚ್. ಡಿ ರೇವಣ್ಣ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಪ್ರಕರಣದಲ್ಲಿ ರಾಜ್ಯ ಸರ್ಕಾರ ಬಹಳ ಆತುರ ತೋರಿದೆ ಎಂದು ನನಗೆ ಅನ್ನಿಸುತ್ತಿದೆ. ಎಫ್ಐಆರ್ನಲ್ಲಿ ತಪ್ಪು ಮಾಹಿತಿ ನೀಡಿರುವುದು ಎಲ್ಲವೂ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದರು.
ಕಾಂಗ್ರೆಸ್ ರೇವಣ್ಣ ಅವರನ್ನು ಜೈಲಿಗೆ ಕಳುಹಿಸಲೇಬೇಕು ಅಂತ ಕುತಂತ್ರ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲ ಎಂದು ಸಂತ್ರಸ್ತೆ ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ನಿತ್ಯ ಪ್ರಕರಣವನ್ನು ಮಾನಿಟರ್ ಮಾಡುತ್ತಿದ್ದಾರೆ. ಸುರ್ಜೇವಾಲಾ, ಸಿದ್ದರಾಮಯ್ಯ, ಡಿ. ಕೆ ಶಿವಕುಮಾರ್ ಎಲ್ಲರೂ ದಿನವೂ ಮಾನಿಟರ್ ಮಾಡುತ್ತಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ಈ ಪ್ರಕರಣವನ್ನು ಪಶ್ಚಿಮ ಬಂಗಾಳದ ಘಟನೆಗೆ ಟ್ಯಾಗ್ ಮಾಡಬೇಕು. ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶದಿಂದ ಬೇಗ ಬೇಗ ಇಷ್ಟೆಲ್ಲ ಮಾಡಿದ್ದಾರೆ. ಎಸ್ಐಟಿಯವರು ಸ್ಥಳ ಮಹಜರು ಎಲ್ಲ ನಿಧಾನವಾಗಿ ಮಾಡಬಹುದಾಗಿತ್ತು. ಚುನಾವಣೆಗೋಸ್ಕರ ಪೂರ್ತಿ ನಾಟಕ ಮಾಡಿದಂತೆ ಕಾಣುತ್ತಿದೆ ಎಂದು ಆರೋಪಿಸಿದರು.