ಬೆಂಗಳೂರು: ರಾಜ್ಯದಲ್ಲಿ ಜನರು ಕಳೆದ 5 ತಿಂಗಳುಗಳಿಂದ ಬರಗಾಲದ ನೋವು ಅನುಭವಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಮಲ್ಲೇಶ್ವರದ ಬಾವುರಾವ್ ದೇಶಪಾಂಡೆ ಭವನದಲ್ಲಿ ಮಾತನಾಡಿದ ಅವರು, ಬರಗಾಲಪೀಡಿತ ಎಂದು ಘೋಷಿಸುವ ಮೊದಲು ಅಳೆದು ತೂಗಿ 3 ತಿಂಗಳು ಮುಂದೆ ಹಾಕಿದ್ದರು. ರಾಜ್ಯ ಸರ್ಕಾರದಲ್ಲಿ ಹಣ ಇಲ್ಲದ ಕಾರಣ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದರು. ಜನರು ಗುಳೆ ಹೋಗುತ್ತಿದ್ದಾರೆ ಎಂದರೆ ಸರ್ಕಾರ ಒಪ್ಪುತ್ತಿಲ್ಲ. ಹಾಗಿದ್ದರೆ ಮನೆಗಳಿಗೆ ಯಾಕೆ ಬೀಗ ಹಾಕಿದ್ದಾರೆ ಎಂದು ಪ್ರಶ್ನಿಸಿದರು.
ಹಳ್ಳಿಗಳಲ್ಲಿ ಕೇವಲ ವಯಸ್ಸಾದವರು ಇದ್ದಾರೆ. ಯುವಕರು, ಮಧ್ಯ ವಯಸ್ಕರು ಹಳ್ಳಿಗಳಲ್ಲಿ ಇಲ್ಲ. ಹಾಗಿದ್ದರೆ ಅವರು ಎಲ್ಲಿದ್ದಾರೆ?. ಸರ್ಕಾರವು ಕುಂಭಕರ್ಣ ನಿದ್ರೆಯಲ್ಲಿದೆ. ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿದೆ. ಎಲ್ಲವನ್ನೂ ಮುಚ್ಚಿಡುತ್ತಿದೆ. ಬಾಗಿಲು ಹಾಕಿದರೂ ಮುಚ್ಚಿಡುವುದು, ಪಾಕಿಸ್ತಾನ ಜಿಂದಾಬಾದ್ ಎಂದರೂ ಮುಚ್ಚಿಡುತ್ತದೆ. ಬರಗಾಲ ಇಲ್ಲ ಎಂಬಂತೆ ಮುಚ್ಚಿಡುವ ಕೆಲಸ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಟೀಕಾಪ್ರಹಾರವನ್ನೇ ಮಾಡಿದರು.
ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಇದು ಸುದ್ದಿಯಾಗಿದೆ. ಹೀಗಿದ್ದರೂ ಐ.ಟಿ, ಬಿ.ಟಿಯವರು ಬೆಂಗಳೂರಿಗೆ ಹೋಗಲು ಇಷ್ಟ ಪಡುತ್ತೀರಾ? ಎಂದು ಆ್ಯಂಕರ್ ಕೇಳಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಕಿವಿಯಾರೆ ಕೇಳಿದ್ದೇನೆ. ಬೆಂಗಳೂರಿನ ಮಾನ ಮರ್ಯಾದೆಯನ್ನು ಈ ಕಾಂಗ್ರೆಸ್ ಸರ್ಕಾರ ಹರಾಜು ಹಾಕಿದೆ ಎಂದು ವಾಗ್ದಾಳಿ ನಡೆಸಿದರು.