ಬೆಂಗಳೂರು: ಪ್ರತಿಪಕ್ಷದ ನಾಯಕನಾಗಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೇನೆಯೇ ಹೊರತು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನೆಂದೂ ಅರ್ಜಿ ಹಾಕಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರತಿಪಕ್ಷದ ನಾಯಕನಾಗಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಹಿರಿಯರು ನೀಡಿದ ಈ ನಾಯಕತ್ವದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿದ್ದೇನೆ. ನಾನೇನೂ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಇದಕ್ಕಾಗಿ ನಾನಂತೂ ಅರ್ಜಿ ಹಾಕಿಲ್ಲ. ಆ ಬಗ್ಗೆ ಯೋಚಿಸಿಯೇ ಇಲ್ಲ. ಆದರೆ, ಈ ರೀತಿ ಸಮಸ್ಯೆಯಾಗಿರುವುದು ನನಗೂ ನೋವು ತಂದಿದೆ. ಎಲ್ಲರೂ ಹೊಂದಾಣಿಕೆ ಮಾಡಿಕೊಂಡು ಮುಂದುವರಿಯಬೇಕಾಗಿತ್ತು ಎಂದು ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರ ತಂಡದ ಕುರಿತು ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದೇನೆ. ಪಕ್ಷದಲ್ಲಿ ಎಲ್ಲ ಸಮಸ್ಯೆ ನಿವಾರಣೆಯಾಗಲಿ ಎಂದೇ ನಾನು ಬಯಸುತ್ತೇನೆ. ಕರ್ನಾಟಕದಲ್ಲಿ ಒಂದೇ ಕಡೆ ಬದಲಾವಣೆಯಾಗುತ್ತಿಲ್ಲ. ಇಡೀ ದೇಶದಲ್ಲಿ ಎಲ್ಲ ಕಡೆ ಪಕ್ಷದಲ್ಲಿ ಚುನಾವಣೆ ನಡೆಯುತ್ತಿದೆ. ಇಲ್ಲಿ ಎಲ್ಲರ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದರು.