ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಪದೆ ಪದೇ ವಿಧಾನಸೌಧವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ, ನೀತಿ ಸಂಹಿತೆ ಜಾರಿಯಲ್ಲಿದ್ದರೂ ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿದ್ದು, ಅಕ್ಷಮ್ಯ ಅಪರಾಧವಾಗಿದೆ. ಕ್ರಮ ಕೈಗೊಳ್ಳಬೇಕಾದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕಾಂಗ್ರೆಸ್ ನಾಯಕರ ಕೈಗೊಂಬೆಯಾಗಿದ್ದಾರೆ. ಹಾಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ವಿರುದ್ಧವೇ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಚುನಾವಣೆ ಸಂದರ್ಭದಲ್ಲಿ ವಿಧಾನಸೌಧ ಹೇಗಿರಬೇಕು ಅಂತ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಚುನಾವಣಾ ಆಯೋಗದಿಂದ ಆದೇಶ ಬಂದಿದೆ. ಆದರೆ ನಮ್ಮ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸ್ಥಾನದಲ್ಲಿ ಇರುವ ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆ ಆಗಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಆದೇಶವನ್ನು ಸಿಎಸ್ ಪಾಲಿಸುತ್ತಿಲ್ಲ ಎಂದು ದೂರಿದರು.
ಡಿಸಿಎಂ ಡಿಕೆ ಶಿವಕುಮಾರ್ ಯಾರನ್ನೂ ಹೇಳಲ್ಲ ಕೇಳಲ್ಲ, ಅವರದ್ದೇ ಒಂದು ಗೂಂಡಾ ರಾಜ್ಯ. ವಿಧಾನಸೌಧದಲ್ಲಿನ ಅವರ ಕಚೇರಿಯಲ್ಲಿ ಮುಖಂಡರ ಪಕ್ಷ ಸೇರ್ಪಡೆ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ಬಿಜೆಪಿಯಿಂದ ಸಿಎಸ್‌ಗೆ ದೂರು ನೀಡಲಾಗಿದೆ. ಕ್ರಮ ತೆಗೆದುಕೊಳ್ಳುವುದಾಗಿ ಸಿಎಸ್ ಹೇಳಿದ್ದರು. ಆದರೆ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ. ಇಂದು ವಿಧಾನಸೌಧದಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡಿದೆ, ಇದಕ್ಕೂ ಕೂಡ ಅವಕಾಶ ನೀಡುವಂತಿರಲಿಲ್ಲ. ಆದರೂ ಸಿಎಸ್ ಮೌನವಾಗಿದ್ದಾರೆ. ಇದುವರೆಗೂ ಎರಡು ಮೂರು ಬಾರಿ ನಿಯಮ ಉಲ್ಲಂಘನೆ ಆಗಿದೆ. ಒಂದು ಬಾರಿಯೂ ಸಿಎಸ್ ಕ್ರಮ ತೆಗೆದುಕೊಂಡಿಲ್ಲ. ಹಾಗಾಗಿ ಸಿಎಸ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದರು.