ಬೆಂಗಳೂರು: ರಾಜ್ಯದ ಎರಡನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7 ರಂದು ಮತದಾನ ನಡೆಯಲಿದ್ದು, ನಾಳೆ ಸಂಜೆ 6 ಗಂಟೆಗೆ (ಭಾನುವಾರ) ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಏ.26 ರಂದು ಮತದಾನ ನಡೆದಿತ್ತು. ಇದೀಗ ಎರಡನೇ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಕೊನೆಯ ದಿನ ಅಭ್ಯರ್ಥಿಗಳು ಮನೆ, ಮನೆಗೆ ತೆರಳಿ ಮತಯಾಚನೆ ಮಾಡಲಿದ್ದಾರೆ.
ಎರಡನೇ ಹಂತದ ಚುನಾವಣಾ ಕಣದಲ್ಲಿ 227 ಅಭ್ಯರ್ಥಿಗಳಿದ್ದಾರೆ. ಇವರ ಪೈಕಿ 206 ಪುರುಷ ಅಭ್ಯರ್ಥಿಗಳು ಹಾಗೂ 21 ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ. ಎರಡನೇ ಹಂತದ ಚುನಾವಣೆಗಾಗಿ 28,269 ಮತಗಟ್ಟೆಗಳನ್ನು ತೆರೆಯಲಾಗಿದೆ. 12 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಂಡಾಯದ ಕಾರಣ ಶಿವಮೊಗ್ಗ ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇದೆ.
ಕಾಂಗ್ರೆಸ್, ಬಿಜೆಪಿ ಪ್ರಮುಖ ನಾಯಕರೆಲ್ಲರೂ ನಾಳೆ ಸಂಜೆ ನಂತರ ಚುನಾವಣೆ ನಡೆಯುತ್ತಿರುವ ಕ್ಷೇತ್ರ ಬಿಟ್ಟು ಹೊರಡಲಿದ್ದಾರೆ. ರಾಜ್ಯದ 14 ಕ್ಷೇತ್ರದಲ್ಲಿ ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ ಹಲವಾರು ನಾಯಕರು, ಸಚಿವರು ಹಾಗೂ ಶಾಸಕರು ಉತ್ತರ ಭಾಗದಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಪ್ರಚಾರ ಸಭೆ, ಬಹಿರಂಗ ಸಮಾವೇಶ, ರೋಡ್ ಶೋ, ತಮ್ಮ ತಮ್ಮ ಸಮುದಾಯಗಳ ಸಭೆ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಯಾಚಿಸಿದ್ದು, ಇಂದು ಮತ್ತು ನಾಳೆ ಪ್ರಚಾರದ ವೇಗ ಮತ್ತಷ್ಟು ಹೆಚ್ಚಾಗಲಿದೆ.
ರಾಜಕೀಯ ಪಕ್ಷಗಳ ನಾಯಕರು ಹಾಗೂ ಮುಖಂಡರು ಬಿಸಿಲಿನ ಹೆಚ್ಚು ತಾಪಮಾನವಿದ್ದರೂ ಲೆಕ್ಕಿಸದೆ ಮತಬೇಟೆಯಲ್ಲಿ ನಿರತರಾಗಿದ್ದಾರೆ. ಬಹಿರಂಗ ಪ್ರಚಾರದ ಜೊತೆಗೆ ನಾನಾ ರೀತಿಯ ತಂತ್ರ, ಕಾರ್ಯತಂತ್ರಗಳ ಮೂಲಕ ಮತದಾರರನ್ನು ಆಕರ್ಷಿಸಲು ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಜೊತೆಗೆ ಪಕ್ಷೇತರರು ಕೂಡ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ 14 ಕ್ಷೇತ್ರಗಳಲ್ಲೂ ಪ್ರಚಾರದ ಕಾವು ಏರತೊಡಗಿದೆ.