ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ರವೀಂದ್ರ ಅನಗೋಳ (ETV Bharat) ಬೆಳಗಾವಿ:ಕೋಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ನಾಳೆ ಬೆಳಗಾವಿ ಜಿಲ್ಲಾದ್ಯಂತ ಬಂದ್ಗೆ ಕರೆ ನೀಡಲಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಆರೋಗ್ಯ ಸೇವೆ ಹೊರತುಪಡಿಸಿ, ಒಪಿಡಿ ಸೇವೆ ಬಂದ್ ಇರಲಿದೆ.
ಈ ಸಂಬಂಧ ಬೆಳಗಾವಿ ನಗರದ ಐಎಂಎ ಹಾಲ್ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ರವೀಂದ್ರ ಅನಗೋಳ, ಆಗಸ್ಟ್ 9 ರಂದು ಪಶ್ಚಿಮ ಬಂಗಾಲ ರಾಜ್ಯದ ಕೋಲ್ಕತ್ತಾದಲ್ಲಿ ವೈದ್ಯೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ದೇಶಾದ್ಯಂತ ಕೊಲೆ ಖಂಡಿಸಿ ಪ್ರತಿಭಟನೆ ಮಾಡಲಾಗಿದೆ. ಆದರೆ, ಅಲ್ಲಿನ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಕರ್ತವ್ಯ ಮುಗಿಸಿ ಮಲಗಿದ್ದಾಗ, ಅಮಾನುಷವಾಗಿ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿದೆ. ಆಸ್ಪತ್ರೆ ಮೇಲೆ ದಾಳಿ ಮಾಡಿ ಅಲ್ಲಿರುವ ಪೀಠೋಪಕರಣಗಳನ್ನ ನಾಶ ಪಡಿಸಿದ್ದಾರೆ. ವೈದ್ಯರ ಮೇಲೆ ಪದೇ ಪದೇ ಈ ರೀತಿ ನಡೆಯುತ್ತಿರುವುದನ್ನು ಖಂಡಿಸಿದರೂ ಸರ್ಕಾರ ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ. ಮಹಿಳೆ ವೈದ್ಯರಿಗೆ ಹಾಗೂ ಮಹಿಳಾ ವಿದ್ಯಾರ್ಥಿಗಳಿಗೆ ಸರ್ಕಾರ ಯಾವುದೇ ಭದ್ರತೆ ಕೊಡುತ್ತಿಲ್ಲ ಎಂದು ಆರೋಪಿಸಿದರು.
ವೈದ್ಯ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಸಿಗುವ ಉದ್ದೇಶದಿಂದ ನಮ್ಮ ಹೋರಾಟ ನಡಿಯುತ್ತಿದೆ. ಆಸ್ಪತ್ರೆಗಳಲ್ಲಿ ಸುರಕ್ಷಿತವಾದ ವಾತಾವರಣ ಕಲ್ಪಿಸಬೇಕು. ಕಟ್ಟು ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕಾನೂನು ಬರಬೇಕು. ಎಲ್ಲಾ ವೈದ್ಯರ ಸೇರಿಕೊಂಡು ಕ್ಲಿನಿಕ್, ಆಸ್ಪತ್ರೆ, ಸರ್ಕಾರಿ ಒಪಿಡಿ, ಐಪಿಡಿ ಬಂದ್ ಮಾಡಲು ಎಲ್ಲಾ ವೈದ್ಯರಿಗೆ ಮನವಿ ಮಾಡಿದ್ದೇವೆ. ನಾಳೆ ಪ್ರತಿಭಟನೆ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆ ಮಾತ್ರ ನೀಡುತ್ತೇವೆ ಎಂದು ತಿಳಿಸಿದರು.
24 ಗಂಟೆಗಳ ಕಾಲ ನಾವು ಪ್ರತಿಭಟನೆ ಮಾಡುತ್ತೇವೆ. ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿದೆ. ಭಾರತೀಯ ವೈದ್ಯಕೀಯ ಸಂಘದ ಕೇಂದ್ರ ಕಚೇರಿಯ ನಿರ್ದೇಶನದ ಮೇರೆಗೆ ನಾವು ಬೆಳಗಾವಿಯಲ್ಲಿ ಪ್ರತಿಭಟಿಸಲು ನಿರ್ಧರಿಸಿದ್ದೇವೆ. ನಾಳೆ ಶನಿವಾರ ಬೆಳಗ್ಗೆ 6 ಗಂಟೆಯಿಂದ ರವಿವಾರ 6 ಗಂಟೆಯವರೆಗೂ ಆಸ್ಪತ್ರೆ ಸೇವೆಗಳನ್ನು ಬಂದ್ ಮಾಡಲಾಗುತ್ತದೆ. ಐಎಂಎ, ಆಯುಷ್ ಇಲಾಖೆ ಸೇರಿದಂತೆ ಮತ್ತಿತರ ಸಂಘಟನೆಗಳು ನಾಳಿನ ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ ಎಂದರು.
ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಐಎಂಎ ಕರೆ ನೀಡಿದ ಪ್ರತಿಭಟನೆಯ ಅಂಗವಾಗಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೊರರೋಗಿ ವಿಭಾಗವು ನಾಳೆ ಕಾರ್ಯನಿರ್ವಹಿಸುವುದಿಲ್ಲ. ಆದರೆ, ಅಪಘಾತ ಮತ್ತು ತುರ್ತು ವೈದ್ಯಕೀಯ ಸೇವೆ, ವಾರ್ಡ್ಗಳು, ಲ್ಯಾಬೊರೇಟರಿ(ಪ್ರಯೋಗಾಲಯ) ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: