ದಾವಣಗೆರೆ :ಕಳೆದ ಒಂದೇ ಒಂದು ವರ್ಷದಲ್ಲಿ ನೂರಾರು ಬಾಲ್ಯವಿವಾಹಗಳನ್ನು ಅಧಿಕಾರಿಗಳು ತಡೆಹಿಡಿದಿದ್ದಾರೆ. ಅಲ್ಲದೇ ಪ್ರಸ್ತುತ ವರ್ಷ ಎರಡು ತಿಂಗಳಲ್ಲಿ ಬರೋಬ್ಬರಿ 25 ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲ್ಯವಿವಾಹವನ್ನು ತಡೆಯಲು ಸರ್ಕಾರ ಬಾಲ್ಯವಿವಾಹ ಕಾಯ್ದೆ ಜಾರಿಗೆ ತಂದಿದೆ. ದುರಂತ ಎಂದರೆ ಸರ್ಕಾರ ಹಾಗೂ ಅಧಿಕಾರಿಗಳ ಕಣ್ಣು ತಪ್ಪಿಸಿ ಪೋಷಕರು ಬಾಲ್ಯವಿವಾಹ ಮಾಡುವ ಯತ್ನ ಇಂದಿಗೂ ಮುಂದುವರೆದಿದೆ. ಬಾಲ್ಯ ವಿವಾಹ ಪದ್ದತಿಯನ್ನು ತಡೆಗಟ್ಟಲು ಸರ್ಕಾರ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಸಾಕಷ್ಟು ಪ್ರಯತ್ನ ಪಡುತ್ತಿದ್ದರೂ ಬಡತನ, ಮೂಢನಂಬಿಕೆ, ಸಂಪ್ರದಾಯ ಹಾಗೂ ಅರಿವಿನ ಕೊರತೆಯಿಂದ ಬಾಲ್ಯ ವಿವಾಹ ಆಗ್ತಿವೆ. ಆದ್ದರಿಂದ ಬಾಲ್ಯ ವಿವಾಹ ನಿಷೇಧಿಸಲು, ತಡೆಯಲು ಸರ್ಕಾರ ಸಮಿತಿಯನ್ನು ಕೂಡ ಆಯಾಯ ಜಿಲ್ಲಾ ಮಟ್ಟದಲ್ಲಿ ರಚಿಸಿದೆ. ಆ ಸಮಿತಿ ಮೂಲಕ ಬಾಲ್ಯವಿವಾಹಗಳನ್ನು ತಡೆಯಲಾಗುತ್ತಿದೆ.
ಆ ಸಮಿತಿಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಪಿಡಿಒಗಳು, ಸೂಪರ್ವೈಸರ್ಸ್ ಇದ್ದು, ಇವರೇ ಬಾಲ್ಯ ವಿವಾಹ ತಡೆಯುವುದು, ಅರಿವು ಮೂಡಿಸುವ ಕೆಲಸವನ್ನೂ ಮಾಡ್ತಿದ್ದಾರೆ.
ಕಳೆದ ವರ್ಷದಲ್ಲಿ 194 ಬಾಲ್ಯವಿವಾಹ ತಡೆದ ಅಧಿಕಾರಿಗಳು : ಪ್ರಸಕ್ತ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 26 ಪ್ರಕರಣಗಳ ಪೈಕಿ, 25 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲಾಗಿದೆ. 01 ಪ್ರಕರಣ ಬಾಲ್ಯ ವಿವಾಹ ಆಗಿ ಹೋಗಿದ್ದರಿಂದ ಎಫ್ಐಆರ್ ಮಾಡಲಾಗಿದೆ. ಕಳೆದ ವರ್ಷ 2023 ರಲ್ಲಿ ಒಟ್ಟು 194 ಪ್ರಕರಣಗಳನ್ನು ತಡೆಯಲಾಗಿದ್ದು, ಇದರಲ್ಲಿ ಕೆಲವರ ವಿರುದ್ಧ ಎಫ್ಐಆರ್ ಕೂಡ ಮಾಡಲಾಗಿದೆ.
ದಾವಣಗೆರೆಯಲ್ಲೇ ಹೆಚ್ಚು ಬಾಲ್ಯ ವಿವಾಹ ಗಮನಕ್ಕೆ ಬಂದಿದ್ದು, ದಾವಣಗೆರೆ ತಾಲೂಕಿನಲ್ಲಿ 79 ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನು ಚನ್ನಗಿರಿಯಲ್ಲಿ 51 ಪ್ರಕರಣಗಳು, ಜಗಳೂರು 31 ಪ್ರಕರಣಗಳು ಕಂಡು ಬಂದಿವೆ. ಅಲ್ಲದೇ ಇಡೀ ಜಿಲ್ಲೆಯಲ್ಲಿ ಹರಿಹರ ತಾಲೂಕಿನಲ್ಲಿ ಹೆಚ್ಚು ಬಾಲ್ಯವಿವಾಹ ಪ್ರಕರಣಗಳು ಕಂಡು ಬಂದಿವೆ ಎಂದು ಮಕ್ಕಳ ರಕ್ಷಣಾಧಿಕಾರಿ ಕವಿತ ಟಿ. ಎನ್ ಅವರು ತಿಳಿಸಿದ್ದಾರೆ.