ಹುಬ್ಬಳ್ಳಿ:ವಿಶ್ವವಿಖ್ಯಾತ ಪ್ರವಾಸಿ ತಾಣ ಜೋಗ ಜಲಪಾತದ ವೀಕ್ಷಣೆಗೆ ಪ್ರತಿ ಭಾನುವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಹುಬ್ಬಳ್ಳಿಯಿಂದ ವಿಶೇಷ ಸಾರಿಗೆ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಈ ಬಸ್ಗಳು ಗೋಕುಲ ರಸ್ತೆ ನಿಲ್ದಾಣದಿಂದ ಹೊರಡುತ್ತವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ತಿಳಿಸಿದ್ದಾರೆ.
ಇತ್ತೀಚೆಗೆ ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮೈದುಂಬಿರುವ ಜಲಪಾತಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ಜೋಗ ಜಲಪಾತವೂ ಜನರನ್ನು ಆಕರ್ಷಿಸುತ್ತಿದ್ದು, ಪ್ರಕೃತಿ ಸೌಂದರ್ಯ ಅನನ್ಯವಾಗಿದೆ. "ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ" ಎನ್ನುವಂತೆ ಕಣ್ಮನ ಸೆಳೆಯುವ ಜಲಪಾತದ ದೃಶ್ಯ ವೈಭವ ಸವಿಯಲು ಇದು ಸಕಾಲ.
ಸಾರ್ವಜನಿಕರ ಬೇಡಿಕೆಯ ಮೇರೆಗೆ ಜೋಗ ಜಲಪಾತ ವೀಕ್ಷಿಸಲು ಕುಟುಂಬ ಸದಸ್ಯರೊಂದಿಗೆ ಹೋಗಿ ಬರಲು ಅನುಕೂಲವಾಗುವಂತೆ ಭಾನುವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಹುಬ್ಬಳ್ಳಿಯಿಂದ ರಾಜಹಂಸ ಹಾಗೂ ಮಲ್ಟಿ ಎಕ್ಸೆಲ್ ವೋಲ್ವೋ ಎಸಿ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಮಾರ್ಗಮಧ್ಯದಲ್ಲಿ ಶಿರಸಿ ಮಾರಿಕಾಂಬಾ ದೇವಿಯ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. ಜೋಗದಲ್ಲಿ ಜಲಪಾತ ವೀಕ್ಷಣೆ ಹಾಗೂ ಪ್ರಕೃತಿ ಸೌಂದರ್ಯದ ಸೊಬಗು ಆನಂದಿಸಲು ಸಾಕಷ್ಟು ಸಮಯಾವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ:ಆರಿದ್ರಾ ಮಳೆಯಿಂದ ಕೆರೆ ಕಟ್ಟೆ, ಡ್ಯಾಂಗಳಿಗೆ ಜೀವಕಳೆ: ಧುಮ್ಮಿಕ್ಕಿ ಹರಿಯುತ್ತಿರುವ ಜೋಗ ಜಲಪಾತ - Heavy Rain