ಕರ್ನಾಟಕ

karnataka

ETV Bharat / state

2ನೇ ಹಂತದ ಲೋಕಸಭಾ ಚುನಾವಣೆ: ರಾಯಚೂರಿನಲ್ಲಿ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ - Nomination paper submission - NOMINATION PAPER SUBMISSION

ರಾಜ್ಯದಲ್ಲಿ ಮೇ 7 ರಂದು ನಡೆಯಲಿರುವ 2ನೇ ಹಂತದ ಮತದಾನಕ್ಕೆ ಇಂದಿನಿಂದ ನಾಮಪತ್ರ ಸಲ್ಲಿಸಲು ಪ್ರಕ್ರಿಯೆ ಆರಂಭವಾಗಿದೆ ಎಂದು ರಾಯಚೂರು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ
ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ

By ETV Bharat Karnataka Team

Published : Apr 12, 2024, 9:45 AM IST

Updated : Apr 12, 2024, 4:49 PM IST

ರಾಯಚೂರಿನಲ್ಲಿ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ರಾಯಚೂರು:ರಾಜ್ಯದಲ್ಲಿ ಎರಡನೇ ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ರಾಯಚೂರಿನಲ್ಲಿ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಉಮೇದುದಾರರು ನಾಮಪತ್ರ ಸಲ್ಲಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ್​ ತಿಳಿಸಿದ್ದಾರೆ.

ಚುನಾವಣಾ ಆಯೋಗ ಮಾ.15ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆ - 2024ರ ಅಧಿಸೂಚನೆ ಹೊರಡಿಸಿದೆ‌. ರಾಯಚೂರು ಲೋಕಸಭಾ ಕ್ಷೇತ್ರ ಪರಿಶಿಷ್ಟ ಪಂಗಡ(ಎಸ್‌ಟಿ) ಮೀಸಲು ಕ್ಷೇತ್ರವಾಗಿದ್ದು, ನಾಮ ಪತ್ರಗಳನ್ನು ಉಮೇದುವಾರರು ಅಥವಾ ಅವರ ಸೂಚಕರು ಚುನಾವಣಾಧಿಕಾರಿ ಎಲ್. ಚಂದ್ರಶೇಖರ್ ನಾಯಕ್​ ಅವರಿಗೆ ಅಥವಾ ಸಹಾಯಕ ಚುನಾವಣಾಧಿಕಾರಿ ಅಶೋಕ ದುಡಗುಂಟಿವರಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏ.12ರಿಂದ ಏ.19ರ ವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ಯಾವುದೇ ದಿನದಂದು (ಸರ್ಕಾರಿ ರಜಾದಿನದ ಹೊರತು) ಸಲ್ಲಿಸಬಹುದಾಗಿದೆ.

ನಾಮ ಪತ್ರದ ನಮೂನೆಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಗದಿತ ವೇಳೆಯಲ್ಲಿ ಪಡೆಯಬಹುದು. ನಾಮ ಪತ್ರಗಳನ್ನು ಜಿಲ್ಲಾಧಿಕಾರಿಗಳ ಕಚೇರಿ, ರಾಯಚೂರಿನಲ್ಲಿ ಏ.20ರ (ಶನಿವಾರ) ರಂದು ಬೆಳಗ್ಗೆ 11ಗಂಟೆಗೆ ಪರಿಶೀಲನೆಗೆ ತೆಗೆದುಕೊಳ್ಳಲಾಗುತ್ತದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳುವ ತಿಳಿವಳಿಕೆ ಪತ್ರವನ್ನು ಉಮೇದುವಾರ ಅಥವಾ ಅವರ ಯಾರೇ ಸೂಚಕರು ಅಥವಾ ಅದನ್ನು ಸಲ್ಲಿಸಲು ಉಮೇದುವಾರನಿಂದ ಲಿಖಿತದಲ್ಲಿ ಅಧಿಕೃತನಾದ ಆತನ ಚುನಾವಣಾ ಏಜೆಂಟ್​ ಮೇಲ್ಕಂಡ (2ನೇಯ) ಪ್ಯಾರಾದಲ್ಲಿ ನಿರ್ದಿಷ್ಟಪಡಿಸಿದ ಇಬ್ಬರಲ್ಲೊಬ್ಬ ಅಧಿಕಾರಿಗೆ ನಿಗದಿ ಪಡಿಸಿದ ಕಚೇಯರಿಯಲ್ಲಿ ಏ.22ರ (ಸೋಮವಾರ)ದಂದು ಮಧ್ಯಾಹ್ನ 03 ಗಂಟೆಗೆ ಮುಂಚೆ ಸಲ್ಲಿಸಬಹುದು.

ಚುನಾವಣೆಗೆ ಸ್ಪರ್ಧೆ ನಡೆದ ಸಂದರ್ಭದಲ್ಲಿ ಮೇ.7(ಮಂಗಳವಾರ) ರಂದು ಬೆಳಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯ ವರೆಗೆ ಮತದಾನ ನಡೆಯುವುದು ಎಂದು ಈ ಮೂಲಕ ತಿಳಿಸಲಾಗಿದೆ. ನಾಮಪತ್ರಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಸ್ವೀಕರಿಸಲಾಗುತ್ತಿದ್ದು, ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಚುನಾವಣಾ ಆಯೋಗ ನೀಡಿರುವ ಎಲ್ಲ ಸೂಚನೆಗಳನ್ನು ಪಾಲಿಸುವ ಮೂಲಕ ಅಗತ್ಯ ದಾಖಲೆಗಳೊಂದಿಗೆ ನಾಮಪತ್ರ ಸಲ್ಲಿಸಬೇಕು.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರವನ್ನು ನಮೂನೆ-2ಎ ನಲ್ಲಿ ಸಲ್ಲಿಸಬೇಕು, ನಮೂನೆ-26ರಲ್ಲಿ ರೂ.100/-ಗಳ ಛಾಪಾ ಕಾಗದದಲ್ಲಿ ಅಭ್ಯರ್ಥಿಯ ಘೋಷಣಾ ಪತ್ರ, ಬೇಬಾಕಿಗೆ ಸಂಬಂಧಿಸಿದ ಇಲಾಖೆ ಹಾಗೂ ನೋಟರಿ ಪಬ್ಲಿಕ್​​​​ ಅವರಿಂದ ದೃಢೀಕರಣ ಪತ್ರ ಸಲ್ಲಿಸಬೇಕು. ಸಾಮಾನ್ಯ ಅಭ್ಯರ್ಥಿಗಳು 25,000 ರೂಪಾಯಿ ಹಾಗೂ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೆ 12,500 ರೂಪಾಯಿಗಳ ಭದ್ರತಾ ಠೇವಣಿ ನಿಗದಿಪಡಿಸಲಾಗಿದೆ.

ಈ ನಿಯಮಗಳು ಕಡ್ಡಾಯ:ರಾಷ್ಟ್ರೀಯ, ರಾಜ್ಯ ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಗೆ ಒಬ್ಬ ಸೂಚಕರು, ನೋಂದಾಯಿತ ಮಾನ್ಯತೆ ಪಡೆಯದ ಪಕ್ಷ, ಪಕ್ಷೇತರರು 10 ಸೂಚಕರು ಸಹಿ ಮಾಡಿರಬೇಕು. ರಾಜಕೀಯ ಪಕ್ಷಗಳ ಅಭ್ಯರ್ಥಿಯಾಗಿದ್ದಲ್ಲಿ ಎ ಮತ್ತು ಬಿ ನಮೂನೆಯನ್ನು ನಾಮಪತ್ರ ಸಲ್ಲಿಸುವ ಕೊನೆಯ 2024 ಎ.19 ರಂದು ಮಧ್ಯಾಹ್ನ 03ರೊಳಗೆ ನಾಮಪತ್ರವನ್ನು ಸಲ್ಲಿಸಬಹುದು ಹಾಗೂ ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿ ಪ್ರಮಾಣ ವಚನವನ್ನು ಸ್ವೀಕರಿಸಬೇಕು.

ನಾಮಪತ್ರ ಸಲ್ಲಿಸುವ ಅಭ್ಯರ್ಥಿಯ ಜೊತೆಗೆ 4 ಇತರ ಅಧಿಕೃತ ವ್ಯಕ್ತಿಗಳಿಗೆ ಮಾತ್ರ ನಾಮಪತ್ರ ಸ್ವೀಕೃತಿ ಕೇಂದ್ರದಿಂದ 100 ಮೀಟರ್ ಅಂತರದೊಳಗೆ ಪ್ರವೇಶಿಸಲು ಅವಕಾಶ ಇರುತ್ತದೆ. ನಾಮಪತ್ರ ಸಲ್ಲಿಸುವ ಅಭ್ಯರ್ಥಿಯ ಬೆಂಗಾವಲಿನ 3 ವಾಹನಗಳಿಗೆ ಮಾತ್ರ ನಾಮಪತ್ರ ಸ್ವೀಕೃತಿ ಕೇಂದ್ರದಿಂದ 100 ಮೀಟರ್ ಅಂತರದೊಳಗೆ ಪ್ರವೇಶಿಸಲು ಅವಕಾಶವಿರುತ್ತದೆ.

ನಾಮಪತ್ರ ಸ್ವೀಕೃತಿ ಕೇಂದ್ರದ ಒಳಗಡೆ, ಪ್ರವೇಶ ದ್ವಾರದಲ್ಲಿ, ನಿರ್ಗಮನ ದ್ವಾರದಲ್ಲಿ ಕಣ್ಗಾವಲಿಗೆ 360° ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಾಮಪತ್ರ ಸ್ವೀಕೃತಿ ಕಾರ್ಯದ ಚಿತ್ರೀಕರಣ ಮಾಡಲು ವಿಡಿಯೋ ಕ್ಯಾಮರಾದೊಂದಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ. ಚುನಾವಣಾ ಆಯೋಗದ ಮಾರ್ಗದರ್ಶಗಳನ್ವಯ ನಾಮಪತ್ರ ಸ್ವೀಕೃತಿ ಕಾರ್ಯಕ್ಕೆ ಅವಶ್ಯ ಇರುವ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಲೋಕಸಭೆ ಚುನಾವಣೆ: ಮೊದಲ ಹಂತಕ್ಕೆ ಭರ್ಜರಿ ಮತಬೇಟೆ; 2ನೇ ಹಂತಕ್ಕೆ ಇಂದು ಅಧಿಸೂಚನೆ - Lok Sabha Election 2nd Phase

Last Updated : Apr 12, 2024, 4:49 PM IST

ABOUT THE AUTHOR

...view details