ಬೆಂಗಳೂರು:ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವ ಕುರಿತ ಪತ್ರಕ್ಕೆ ಕೇಂದ್ರದಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಗೃಹ ಸಚಿವರು, ಇನ್ನೆರಡು ದಿನಗಳಲ್ಲಿ ರದ್ದು ಮಾಡುವುದಾಗಿ ಮತ್ತು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ವಿದೇಶಾಂಗ ಸಚಿವರು, ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಮುಖ್ಯಮಂತ್ರಿಯವರು ಮೇ 1ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆ ಪತ್ರ ಎಲ್ಲಿ ಹೋಯಿತು? ಮುಖ್ಯಮಂತ್ರಿಯವರ ಪತ್ರ ಪ್ರಧಾನಮಂತ್ರಿಯವರ ಕಚೇರಿಗೆ ಹೋಗುತ್ತದೆ ಎಂದಾದರೆ ಅದಕ್ಕೆ ಗೌರವ ಸಿಗಬೇಕಲ್ಲವೇ? ಕರ್ನಾಟಕ ಮುಖ್ಯಮಂತ್ರಿ, ಈಗ ಪತ್ರ ಬರೆದಿರುವುದಾಗಿ ವಿದೇಶಾಂಗ ಸಚಿವರು ಹೇಳಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಿತಿಗಳ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿ, ಸಂತ್ರಸ್ತೆಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಣೆ ನೀಡುವುದಾಗಿ ನಾನು ಮತ್ತು ಮುಖ್ಯಮಂತ್ರಿಯವರು ಹೇಳಿದ್ದೇವೆ. ಸಂತ್ರಸ್ತೆಯರನ್ನು ಯಾರು ಕೂಡ ಒತ್ತಾಯ ಮಾಡಿ, ಬೇರೆ ರೀತಿಯಲ್ಲಿ ಬಳಸಿಕೊಳ್ಳಲು ಬಿಡುವುದಿಲ್ಲ. ಸಂತ್ರಸ್ತೆಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಲಯ ಐಜಿಪಿಯವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.