ಕರ್ನಾಟಕ

karnataka

ETV Bharat / state

ದರ್ಶನ್ ಜತೆ ಜೈಲಲ್ಲಿ ಟೀ ಕುಡಿದ ನಾಗನ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್

ದರ್ಶನ್ ಜತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಟೀ ಕುಡಿದ ಕೈದಿ ನಾಗನ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಸೂಚಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : Nov 11, 2024, 10:43 PM IST

ಬೆಂಗಳೂರು:ಜೈಲು ಅಧಿಕಾರಿಗಳ ಸಹಕಾರವಿಲ್ಲದೇ ಕಾನೂನುಬಾಹಿರ ವಸ್ತುಗಳು ಜೈಲಿಗೆ ಪ್ರವೇಶಿಸಲು ಸಾಧ್ಯವೇ ಎಂದು ಪ್ರಶ್ನಿಸಿರುವ ಹೈಕೋರ್ಟ್, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್‌ಗೆ ಜೊತೆಗೆ ಕುಳಿತು ಕಾಫಿ ಕುಡಿಯುತ್ತಿದ್ದ ಪ್ರಕರಣ ಸಂಬಂಧ ತನಿಖೆಯ ನೆಪದಲ್ಲಿ ನಾಗರಾಜು ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗನ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು ಎಂದು ತನಿಖಾಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಪ್ರಕರಣ ಕುರಿತು ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ವಿಲ್ಸನ್ ಗಾರ್ಡನ್ ನಾಗ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಅರ್ಜಿದಾರರು ಮತ್ತು ಜೈಲಿನ ಅಧಿಕಾರಿಗಳ ಶಾಮೀಲು ಇಲ್ಲದೆಯೇ ಕಾನೂನು ಬಾಹಿರ ವಸ್ತುಗಳು ಜೈಲಿನ ಒಳಗೆ ಹೋಗುವುದಕ್ಕೆ ಅವಕಾಶವಿಲ್ಲ. ಹಾಗಾಗಿ, ತನಿಖೆ ಮುಂದುವರಿಸಲು ತಡೆಯೊಡ್ಡಬಾರದು ಎಂಬುದಾಗಿ ಸರ್ಕಾರಿ ಅಭಿಯೋಜಕರು ಪ್ರತಿಪಾದಿಸುತ್ತಿದ್ದಾರೆ. ಆದ್ದರಿಂದ ತನಿಖಾಧಿಕಾರಿಗಳು ತನಿಖೆಯನ್ನು ಮುಂದುವರಿಸಬಹುದು. ಆದರೆ, ತನಿಖೆಯ ನೆಪದಲ್ಲಿ ಅರ್ಜಿದಾರಿಗೆ ಕಿರುಕುಳ ನೀಡಬಾರದು. ಆತನ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು. ತನಿಖಾಧಿಕಾರಿಗಳು ಹೈಕೋರ್ಟ್ ಅನುಮತಿಯಿಲ್ಲದೇ ತನಿಖೆಯ ಅಂತಿಮ ವರದಿಯನ್ನು ಸಲ್ಲಿಸಬಾರದು ಎಂದು ಮಧ್ಯಂತರ ಆದೇಶ ನೀಡಿದೆ.

ಜೈಲಿನ ಅಧಿಕಾರಿಗಳಿಗೆ ಅಭಿಯೋಜನೆ :ಅರ್ಜಿ ವಿಚಾರಣೆ ವೇಳೆ, ಸರ್ಕಾರದ ಹೆಚ್ಚವರಿ ಅಭಿಯೋಜಕ ಬಿ.ಎನ್. ಜಗದೀಶ್, ಅರ್ಜಿದಾರರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಕಲ್ಪಿಸಿದ ಪ್ರಕರಣ ಇದಾಗಿದೆ. ಇದೇ ಕಾರಣಕ್ಕೆ ಜೈಲಿನ ಅಧಿಕಾರಿಗಳನ್ನು ಅಭಿಯೋಜನೆ ಗುರಿಪಡಿಸಲಾಗುತ್ತಿದೆ. ಅದಕ್ಕಾಗಿ ಸಕ್ಷಮ ಪ್ರಾಧಿಕಾರದಿಂದ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ ೧೭ಎ ಅಡಿಯಲ್ಲಿ ಪೂರ್ವಾನುಮತಿ ಕೋರಲಾಗಿದೆ ಎಂದರು.

ಜೈಲಿನ ಒಳಗೆ ಹೇಗೆ ಹೋಯ್ತು ಸಿಗರೇಟು?:ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ಅದು ಆಯ್ತು. ಅರ್ಜಿದಾರರ ತಪ್ಪೇನು? ಜೈಲಿನ ಒಳಗೆ ಹೇಗೆ ಹೋಯ್ತು ಸಿಗರೇಟು? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸರ್ಕಾರಿ ಅಭಿಯೋಜಕರು, ಈ ಕುರಿತು ವಿಚಾರಣೆ ನಡೆಯಬೇಕಿದೆ. ಅರ್ಜಿದಾರರು ಪ್ರತಿಫಲ ಪಡೆಯಲು ಜೈಲಿನ ಅಧಿಕಾರಿಗಳಿಗೆ ಹಣ ಪಾವತಿ ಮಾಡಿರಬಹುದು. ಜೈಲಲ್ಲಿ ಧೂಮಪಾನ ಸಹ ಅಪರಾಧವಾಗಿದೆ. ಆರೋಪಿಗಳು ಅಡುಗೆ ಎಣ್ಣೆಯ ಟಿನ್ ಕ್ಯಾನ್ ಅನ್ನು ಅರ್ಧಕ್ಕೆ ಕತ್ತರಿಸಿ, ಮಣ್ಣು ಬಳಕೆ ಮಾಡಿ, ತಮ್ಮದೇ ಸ್ವಂತ ವಿದ್ಯುತ್ ಸ್ಟವ್​​ ತಯಾರು ಮಾಡಿಕೊಂಡು ಅಡುಗೆ ತಯಾರು ಮಾಡಿಕೊಳ್ಳಲಾಗಿದೆ. ಜೈಲಿನ ಅಧಿಕಾರಿಗಳಿಗೆ ಲಂಚ ನೀಡದ ಹೊರತು ಈ ಎಲ್ಲಾ ಸೌಲಭ್ಯಗಳು ಸಿಗುವುದಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳಿಗೆ ಕುರ್ಚಿಗಳನ್ನು ಸಹ ಒದಗಿಸಲಾಗಿದೆ ಎಂದರು.

ಅರ್ಜಿದಾರರು ಪರ ವಕೀಲರು, ನಾಗರಾಜು ಸಜಾ ಬಂಧಿಯಾಗಿದ್ದು, ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ನಾಗರಾಜು ಕಾಫಿ ಸೇವನೆ ಮಾಡುತ್ತಿದರಷ್ಟೇ. ಅವರ ಕೈಯಲ್ಲಿ ಸಿಗರೇಟ್ ಇರಲಿಲ್ಲ. ಸಿಗರೇಟ್ ಇದ್ದದ್ದು ದರ್ಶನ್ ಕೈಯಲ್ಲಿ. ನಾಲ್ಕನೇ ಆರೋಪಿ ತಂಬಾಕು ಸೇವನೆ ಮಾಡುತ್ತಿದ್ದರು. ನಾಗ ಎರಡನೇ ಆರೋಪಿ. ಇದೇ ಪ್ರಕರಣದ ನಾಲ್ಕನೇ ಆರೋಪಿ ಕುಳ್ಳ ಸೀನಾ ವಿರುದ್ಧದ ವಿಚಾರಣೆ ತಡೆ ನೀಡಲಾಗಿದೆ ಎಂದರು.

ಈ ಎಲ್ಲಾದಕ್ಕೂ ಯಾರು ಹೊಣೆಗಾರರು? :ಈ ವೇಳೆ ಮಧ್ಯಪ್ರವೇಶಿಸಿದ ಪೀಠ, ಹೌದು. ಈ ಎಲ್ಲಾದಕ್ಕೂ ಯಾರು ಹೊಣೆಗಾರರು? ಕಾನೂನು ಬಾಹಿರ ವಸ್ತುಗಳನ್ನು ಹೇಗೆ ಜೈಲಿನ ಒಳಗೆ ಬಿಡಲಾಯಿತು. ಜೈಲಿನಲ್ಲಿ ಧೂಮಪಾನ ವಲಯ (ಸ್ಮ್ಕೋಕಿಂಗ್ ಜೋನ್) ಬೇರೆ ಇಟ್ಟುಕೊಳ್ಳಲಾಗಿದೆ. ಅವು ಏಕೆ ಜೈಲಿನಲ್ಲಿವೆ? ಜೈಲಿನ ಅಧಿಕಾರಿಗಳು ಶಾಮೀಲಾಗದಿದ್ದರೆ ಈ ಘಟನೆಗಳು ನಡೆಯವುದೇ ಇಲ್ಲ. ಆರೋಪಿಗಳಿಗೆ ಆ ಕುರ್ಚಿಗಳನ್ನು ಸರ್ಕಾರಿ ಅಧಿಕಾರಿಗಳೇ ಕೊಟ್ಟಿದ್ದಾರೆ. ಅದಕ್ಕೆ ಜೈಲಿನ ಅಧಿಕಾರಿಗಳ ಮೇಲೆ ಅಭಿಯೋಜನೆ ಕೈಗೆತ್ತಿಕೊಳ್ಳಲಿ. ಆದರೆ, ಅರ್ಜಿದಾರರು ಕಾಫಿ ಕುಡಿಯುವುದು ತಪ್ಪೇನೇ? ಅವರ ವಿರುದ್ಧ ಬಲವಂತದ ಕ್ರಮವನ್ನು ಏಕೆ ತೆಗೆದುಕೊಳ್ಳುತ್ತೀರಿ ಎಂದು ಮರು ಪ್ರಶ್ನೆ ನೀಡಿದರು. ತನಿಖೆಗೆ ಅವಕಾಶ ನೀಡಿ ಬಲವಂತದ ಕ್ರಮ ಬೇಡ ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ಇದನ್ನೂ ಓದಿ:ಇನ್ನೆರಡು ತಿಂಗಳೊಳಗೆ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ: ರಮೇಶ್​ ಜಾರಕಿಹೊಳಿ ಆಶಾಭಾವನೆ

ABOUT THE AUTHOR

...view details