ಬೆಂಗಳೂರು:"ಬಿಜೆಪಿಯವರು ಮುಡಾ ವಿಚಾರವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವುದಾದರೆ, ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುವುದಾದರೆ, ನಾವೂ ಸಹ ರಾಷ್ಟ್ರಮಟ್ಟದಲ್ಲಿಯೇ ಹೋರಾಟ ಮಾಡಲಿದ್ದೇವೆ. ಸ್ವತಂತ್ರವಾಗಿ ಅಥವಾ ಇಂಡಿಯಾ ಮೈತ್ರಿಕೂಟದೊಂದಿಗೆ ಸೇರಿ ಹೋರಾಟ ಮಾಡಬೇಕಾ ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಬೆಂಗಳೂರಿನ ತಮ್ಮ ನಿವಾಸದ ಬಳಿ ಇಂದು ಪ್ರತಿಕ್ರಿಯಿಸಿದ ಅವರು, "ರಾಜ್ಯಪಾಲರ ನಡೆಯ ಕುರಿತು ನಾವು ಚರ್ಚಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಪ್ರತಿಭಟನೆಯ ನಂತರ ಅಥವಾ ಅದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಶಾಸಕರು, ಪರಿಷತ್ತಿನ ಸದಸ್ಯರು, ಸಂಸದರು ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ. ಪ್ರತಿಭಟನೆಗೆ ಮಣಿಯುವುದು ಬಿಡುವುದು ನಂತರದ ವಿಚಾರ. 'ಆದರೆ, ಶಾಸಕರೆಲ್ಲಾ ಬಂದು ಹೇಳಿದ್ದರೆ ನಿರ್ಧಾರ ಮಾಡುತ್ತಿದ್ದೆ' ಎಂದು ನಾಳೆಯ ದಿವಸ ಹೇಳಬಹುದು. ಆದ್ದರಿಂದ ಆ ಪ್ರಯತ್ನವನ್ನೂ ಸಹ ಮಾಡಲಿದ್ದೇವೆ" ಎಂದರು.
"ಮುಡಾ ಹಗರಣದ ಆರೋಪದಲ್ಲಿ ಸಿದ್ದರಾಮಯ್ಯ ಅವರು ಭಾಗಿಯಾಗಿರುವ ಕುರಿತು ಯಾವುದೇ ಪುರಾವೆಗಳಿಲ್ಲ, ಸಹಿಯಿಲ್ಲ, ಅವರ ಆದೇಶವಿಲ್ಲ, ನೊಂದಣಿಯಲ್ಲಿ ಸಹ ಅವರ ಹೆಸರಿಲ್ಲ. ಆದ್ದರಿಂದ ಪ್ರಾಸಿಕ್ಯೂಷನ್ ಅನುಮತಿ ವಿಚಾರದಲ್ಲಿ ನಾಳೆ ನ್ಯಾಯಾಲಯ ಇದನ್ನು ಪರಿಗಣಿಸುವುದಿಲ್ಲ ಎಂದು ಕೊಂಡಿದ್ದೇವೆ." ಎಂದು ಹೇಳಿದರು.
ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್ಗೆ ಕೆಐಎಡಿಬಿಯಿಂದ 5 ಎಕರೆ ಜಾಗ ಪಡೆದುಕೊಳ್ಳುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, "ರಾಜ್ಯಪಾಲರು ಅದನ್ನು ಪರಿಶೀಲನೆ ಮಾಡಲಿ. ನಿಯಮಬಾಹಿರವಾಗಿದ್ದರೆ ಕ್ರಮ ಕೈಗೊಳ್ಳುವುದಕ್ಕೆ ಅವರು ಸ್ವತಂತ್ರರಿದ್ದಾರೆ. ಆದರೆ, ಕೆಐಡಿಬಿ ನಿಯಮಾನುಸಾರವಾಗಿ, ನಿಗದಿಯಾದ ಬೆಲೆಗೆ ಯಾರು ಬೇಕಾದರೂ ಜಾಗ ಪಡೆಯಬಹುದು" ಎಂದರು.