ಕರ್ನಾಟಕ

karnataka

ETV Bharat / state

ಶೆಟ್ಟರ್ ಬಿಜೆಪಿಗೆ ಹೋದ್ರೆ ಕಾಂಗ್ರೆಸ್​ ಪಕ್ಷಕ್ಕೆ ಏನೂ ಡ್ಯಾಮೇಜ್ ಆಗಲ್ಲ: ಸಚಿವ ಎಂ.ಬಿ. ಪಾಟೀಲ್ - ಲಿಂಗಾಯತರಿಗೆ ಡಿಸಿಎಂ ಕೊಡುವ ವಿಚಾರ

ಶೆಟ್ಟರ್​​​ಗೆ ಧಾರವಾಡ ಲೋಕಸಭಾ ಟಿಕೆಟ್ ಕೊಡುವ ನಿರ್ಧಾರ ಮಾಡಿದ್ವಿ, ಅದಕ್ಕಿಂತ ಮುಂಚೆ ಬಿಜೆಪಿ ಸೇರಿದ್ದಾರೆ. ಅವರು ಚುನಾವಣೆಯಲ್ಲಿ ಪರಾಭವಗೊಂಡ್ರು ಎಂಎಲ್​​ಸಿ‌ ಮಾಡಿದ್ವಿ. ಪಾರ್ಲಿಮೆಂಟ್ ಎಲೆಕ್ಷನ್ ನಂತರ ಅವರಿಗೆ ಒಳ್ಳೆಯ ಭವಿಷ್ಯ ಇತ್ತು. ಆದ್ರೂ ತರಾತುರಿಯಲ್ಲಿ ಹೋಗಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು.

Minister MB Patil spoke to the media.
ಸಚಿವ ಎಂ.ಬಿ.ಪಾಟೀಲ್ ಮಾಧ್ಯಮದವರ ಜೊತೆ ಮಾತನಾಡಿದರು.

By ETV Bharat Karnataka Team

Published : Jan 25, 2024, 5:48 PM IST

ಸಚಿವ ಎಂ.ಬಿ.ಪಾಟೀಲ್ ಮಾಧ್ಯಮದವರ ಜೊತೆ ಮಾತನಾಡಿದರು.

ಬೆಂಗಳೂರು:ಜಗದೀಶ್ ಶೆಟ್ಟರ್ ಘನತೆಗೆ ಶೋಭೆ ತರುವಂತದ್ದಲ್ಲ, ಅವರು ಹೋದ್ರೆ ಪಕ್ಷಕ್ಕೆ ಏನೂ ಡ್ಯಾಮೇಜ್ ಆಗಲ್ಲ ಎಂದು ಸಚಿವ ಎಂ ಬಿ ಪಾಟೀಲ್ ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾವು ಶೆಟ್ಟರ್​​​ಗೆ ಧಾರವಾಡ ಲೋಕಸಭಾ ಟಿಕೆಟ್ ಕೋಡುವ ನಿರ್ಧಾರ ಮಾಡಿದ್ವಿ.ಆದ್ರೆ ಅದಕ್ಕಿಂತ ಮುಂಚೆ ಬಿಜೆಪಿ ಸೇರಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗುವ ಬಗ್ಗೆ ಮಾಹಿತಿಯಿಲ್ಲ. ನಮಗೂ ಈ ವಿಷಯ ತಿಳಿದು ಆಶ್ಚರ್ಯ ಆಯ್ತು. ಅದು ದುರದೃಷ್ಟಕರ ವಿಚಾರ ಎಂದು ಅಸಮಾಧಾನ ಹೊರಹಾಕಿದರು.

ಅವರ ಮತಕ್ಷೇತ್ರದಲ್ಲಿ ಪಕ್ಷ ಕಟ್ಟಿ ಬೆಳೆಸಿದ್ರು. ಕೇವಲ ಒಂದು ಟಿಕೆಟ್ ಕೊಡಲಿಲ್ಲ. ಅಂತ ಸಂದರ್ಭದಲ್ಲಿ ನಾವು ಟಿಕೆಟ್ ಕೊಟ್ಟಿದ್ದೇವೆ. ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಮಾಧ್ಯಮದಲ್ಲಿ‌ ನೋಡಿದಾಗ ಮೊದಲು ನಿಜ ಅಂದುಕೊಂಡಿರಲಿಲ್ಲ. ಆಮಿಷಕ್ಕೆ ಒಳಗಾಗಿದ್ರೆ ಅವರ ಘನತೆಗೆ ಹಿನ್ನಡೆ ಆಗುತ್ತೆ. ನಮಗೆ ಹಿನ್ನಡೆ ಅಂತಲ್ಲ. ಇವರ ವೈಯಕ್ತಿಕ ನಿರ್ಧಾರಕ್ಕೆ ಲಿಂಗಾಯತರು ಒಪ್ಪಬೇಕಲ್ಲ. ಅವರು ಪರಾಭವಗೊಂಡ್ರು, ಆದ್ರೂ ಎಂಎಲ್​​ಸಿ‌ ಮಾಡಿದ್ವಿ. ಅವರನ್ನ ಗೌರವಿಸುವ ಕೆಲಸ ಮಾಡಿದ್ವಿ. ಪಾರ್ಲಿಮೆಂಟ್ ಎಲೆಕ್ಷನ್ ನಂತ್ರ ಅವರಿಗೆ ಒಳ್ಳೆಯ ಭವಿಷ್ಯ ಇತ್ತು. ಆದ್ರೂ ಕೂಡ ತರಾತುರಿಯಲ್ಲಿ ಹೋಗಿದ್ದಾರೆ ಎಂದು ಕಿಡಿಕಾರಿದರು.

ಅವರು ಮಾಜಿ ಸಿಎಂ, ಅವರ ಮೇಲೆ ಏನೂ ಒತ್ತಡ ಇತ್ತೋ. ಏನ್ ಆಮಿಷ ಒಡ್ಡಿದ್ದರೋ ಗೊತ್ತಿಲ್ಲ. ಒಂದು ವೇಳೆ ಆಮಿಷ ಒಡ್ಡಿದ್ದರೆ, ಅದಕ್ಕೆ ನಿರ್ಧಾರ ತೆಗೆದುಕೊಂಡಿದ್ರೆ ದುರದೃಷ್ಟಕರ. ಅವರು ಏನು ಹೇಳ್ತಾರೋ, ಏನು ಕಾರಣ ಕೊಡ್ತಾರೋ ನೋಡೋಣ. ನಾವು ಶೆಟ್ಟರ್ ಅವರಿಗೆ ಲೋಕಸಭೆ ಟಿಕೆಟ್ ಕೊಡ್ತಿದ್ವಿ. ನಿಶ್ಚಿತವಾಗಿ ಅವರ ಹೆಸರು ಇತ್ತು. ಬಿಎಸ್ ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರಿಂದ ನಮಗೆ ಪ್ಲಸ್ ಆಗಿತ್ತು. ಶೇ 75 ರಷ್ಟು ಲಿಂಗಾಯತರು ಕಾಂಗ್ರೆಸ್ ಗೆ ಮತ ಹಾಕಿದ್ರು ಎಂದು ತಿಳಿಸಿದರು.

ಲಿಂಗಾಯತರಿಗೆ ಡಿಸಿಎಂ ಕೊಡುವ ವಿಚಾರ: ಲಿಂಗಾಯತ ಡಿಸಿಎಂ ಬಗ್ಗೆ ಈಗಾಗಲೇ ಪಕ್ಷದಲ್ಲಿ ಹೇಳಿದ್ದೇನೆ. ಪಕ್ಷ ಏನು ನಿರ್ಧಾರ ‌ಮಾಡುತ್ತೆ ಅಂತ ನೋಡೋಣ. ಯಡಿಯೂರಪ್ಪ ಅವರನ್ನು ಈಗಾಗಲೇ ತೆಗೆದುಹಾಕಿದ್ದಾರೆ. ಮತ್ತೆ ಸಿಎಂ ಮಾಡ್ತಾರಾ?. ಯಡಿಯೂರಪ್ಪ ಅವರನ್ನು ಬಳಸಿಕೊಳ್ಳಲು ಮಗನಿಗೆ ಸ್ಥಾನ ಕೊಟ್ಟಿದ್ದಾರೆ. ಲಿಂಗಾಯತ ಮತಗಳನ್ನು ಯಾರು ಗುತ್ತಿಗೆ ತೆಗೆದುಕೊಂಡಿಲ್ಲ. ನಾನು ವೈಯಕ್ತಿಕ ನಿರ್ಧಾರ ಮಾಡಿದ್ರೆ ಲಿಂಗಾಯತರು ಬೆಂಬಲ ಕೊಡ್ತಾರೆ. ಲಿಂಗಾಯತ ಮತಗಳು ಎಲ್ಲೂ ಹೋಗಲ್ಲ. ಕಾಂಗ್ರೆಸ್ ಪಕ್ಷದಲ್ಲೇ ಉಳಿಯುತ್ತವೆ ಎಂದು ಎಂ ಬಿ ಪಾಟೀಲ್​ ತಿರುಗೇಟು ನೀಡಿದ್ರು.

ಶೆಟ್ಟರ್ ಬೀಗರಾಗಿದ್ರೆ ಅದು ಮನೆಯಲ್ಲಿ ಮಾತ್ರ, ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ: ಎಸ್​ ಎಸ್​ ಮಲ್ಲಿಕಾರ್ಜುನ್‌

ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂಗೆ, ಇವೆಲ್ಲ ತಾತ್ಕಾಲಿಕ, ಶೆಟ್ಟರ್​ ಅವರು ನಮಗೆ ಬೀಗರಾಗಿದ್ರೆ ಮನೆಯಲ್ಲಿ ಮಾತ್ರ ಸಂಬಂಧ. ಅದ್ರೆ ಪಕ್ಷಕ್ಕೂ ಅದಕ್ಕೂ ಸಂಬಂಧ ಇಲ್ಲವೆಂದು ಸಚಿವ ಎಸ್ಎಸ್ ಮಲ್ಲಿಕಾರ್ಜುನ್‌ ತಿಳಿಸಿದರು. ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬಿಜೆಪಿಗೆ ಹೋಗುವುದರಿಂದ ನಮಗೆ ಹಿನ್ನಡೆ ಆಗಲ್ಲ. ಅದು ಅವರ ವೈಯಕ್ತಿಕ ವಿಚಾರ. ನಮ್ಮದು ಕಾಂಗ್ರೆಸ್ ಫ್ಯಾಮಿಲಿ, ನಾವು ಯಾವಾಗಲೂ ಕಾಂಗ್ರೆಸ್. ಶೆಟ್ಟರ್​ ಬಿಜೆಪಿ ಸೇರ್ಪಡೆಯಿಂದ ನಮಗೇನು ಎಫೆಕ್ಟ್ ಆಗಲ್ಲ ಎಂದು ಹೇಳಿದ್ರು.

ಶೆಟ್ಟರ್ ಸೇರ್ಪಡೆ ಚುನಾವಣೆ ಮೇಲೆ ಪರಿಣಾಮ ಬೀರಲ್ಲ:ನಮ್ಮ ಕಾಂಗ್ರೆಸ್ ವೋಟ್ ಬ್ಯಾಂಕ್ ನಮಗಿದೆ, ಅವರಿಗಿದ್ದುದು ಅವರಿಗಿದೆ, ಏನೂ ಎಫೆಕ್ಟ್ ಆಗಲ್ಲ.‌ ಬಿಜೆಪಿಗೆ ಶೆಟ್ಟರ್ ಮರಳಿರುವುದು ಅದು ಅವರ ವೈಯಕ್ತಿಕ ವಿಚಾರ. ಅವರು ಬಿಜೆಪಿಗೆ ಹೋಗಿರುವುದು ನನಗೆ ಗೊತ್ತಿಲ್ಲ, ಈ ಬೆಳವಣಿಗೆ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ.

ಅವರು ಬಿಜೆಪಿಗೆ ಹೋದ್ರು ನಮಗೆ ಕಾಂಗ್ರೆಸ್ ಮತಗಳಿವೆ, ಕಾಂಗ್ರೆಸ್​ಗಾಗಿ ಜನ, ಕಾಂಗ್ರೆಸ್​ಗಾಗಿ ಕೆಲಸ ಮಾಡುವ ಕಾರ್ಯಕರ್ತರು ಇದ್ದಾರೆ.ಅದ್ರೇ ಅವರನ್ನು ಕಾಂಗ್ರೆಸ್​​ಗೆ ಕರೆತರುವ ವೇಳೆ ನಾನು ಮಧ್ಯಸ್ಥಿಕೆ ವಹಿಸಿಲ್ಲ,ಶೆಟ್ಟರ್ ಬಿಜೆಪಿಗೆ ಮರಳಿರುವುದು ಲೋಕಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಅಂತಹದ್ದೇನು ಪರಿಣಾಮ ಬೀರಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಅವರೇಕೆ ಸೋತ್ರು: ವಿಧಾನಸಭೆ ವೇಳೆ ಉತ್ತರ ಕರ್ನಾಟಕ ಭಾಗದಲ್ಲಿ ಶೆಟ್ಟರ್ ಅವರಿಂದ ಕೆಲ ಸ್ಥಾನ ಕಾಂಗ್ರೆಸ್​ಗೆ ಬಂದಿದ್ದರೆ ಅವರು ಯಾಕೆ ಸೋತರು. ಅದ್ರೆ ಕೆಲಭಾಗದಲ್ಲಿ ಮಾತ್ರ ವಿಧಾನಸಭೆ ಚುನಾವಣೆಯಲ್ಲಿ ಪರಿಣಾಮ ಬೀರಿರಬಹುದು ಎಂದರು.

ಶ್ರೀರಾಮ ಮಂದಿರ ಉದ್ಘಾಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಶ್ರೀರಾಮ ಮಂದಿರದಿಂದ ಏನೂ ಕಾಂಗ್ರೆಸ್ ಗೆ ಪರಿಣಾಮ ಬೀರುವುದಿಲ್ಲ. ಜನರಿಗೆ ಮೊದಲು ಆರೋಗ್ಯ ವಸತಿ, ಊಟ, ಶಿಕ್ಷಣ ಬೇಕಾಗಿರುವುದು. ರಾಮನೂ ಬೇಕು, ಅದನ್ನೇ ಒಂದು ದೊಡ್ಡದು ಮಾಡುವುದಲ್ಲ, ನಾವು ರಾಮನ ಭಕ್ತರೇ. ಬಿಜೆಪಿಯವರು ಅಷ್ಟೇನಾ ರಾಮ ಭಕ್ತರು ಎಂದು ವ್ಯಂಗ್ಯವಾಗಿ ಟೀಕಿಸಿದರು.

ಪ್ರತಿಕ್ರಿಯಿಸಲು ಶಾಮನೂರು ನಕಾರ:ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಮಧ್ಯಸ್ಥಿಕೆ ವಹಿಸಿದ್ದ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇಲ್ಲ ನನಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಳ್ಬೇಡಿ ಎಂದು ಮಾತನಾಡಲು ಹಿಂದೇಟು ಹಾಕಿದರು.

ಇದನ್ನೂಓದಿ:ಶೆಟ್ಟರ್ ಮತ್ತೆ ಬಿಜೆಪಿಗೆ ಸೇರಿ ನಮ್ಮ ವಿಶ್ವಾಸಕ್ಕೆ ಧಕ್ಕೆ ತಂದಿದ್ದಾರೆ: ಡಿಸಿಎಂ ಡಿಕೆಶಿ ಬೇಸರ

ABOUT THE AUTHOR

...view details