ಶಿವಮೊಗ್ಗ:ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹುಟ್ಟುವ ತುಂಗ ಭದ್ರಾ ನದಿಗಳು ಕಲುಷಿತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನದಿಯ ಉಳಿವಿಗಾಗಿ ಇಂದಿನಿಂದ ಶೃಂಗೇರಿಯಿಂದ ದಾವಣಗೆರೆ ಜಿಲ್ಲೆಯ ಹರಿಹರದ ಕಿಷ್ಕಿಂಧೆ ಪಟ್ಟಣದವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಹಾಗೂ ಪರ್ಯಾವರಣ ಟ್ರಸ್ಟ್ ಸಹಯೋಗದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಶೃಂಗೇರಿಯಿಂದ ಪಾದಯಾತ್ರೆ ಪ್ರಾರಂಭವಾಗುತ್ತದೆ. ನವೆಂಬರ್ 14ರಂದು ಹರಿಹರದಲ್ಲಿ ಮೊದಲ ಹಂತದ ಪಾದಯಾತ್ರೆ ಮುಕ್ತಾಯವಾಗಲಿದೆ. ಶೃಂಗೇರಿಯಿಂದ ಹರಿಹರದತನಕ 200 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಗಂಗಾ ನದಿ ಉಳಿವಿಗಾಗಿ ನಡೆಸಿದ ಪಾದಯಾತ್ರೆಯ ಯಶಸ್ವಿಯೇ ಈ ಅಭಿಯಾನಕ್ಕೆ ಪ್ರೇರಣೆಯಾಗಿದೆ.
ಪಾದಯಾತ್ರೆಯುದ್ದಕ್ಕೂ ಜಲ ಜಾಗೃತಿ:ಈ ಅಭಿಯಾನದಲ್ಲಿ ನೀರು ಎಲ್ಲರಿಗೂ ಅತ್ಯಮೂಲ್ಯ ಎಂಬುದನ್ನು ತಿಳಿಸಲು ಹಾಗೂ ಜಲ ಮೂಲಗಳ ಸಂರಕ್ಷಣೆ ಮಾಡಬೇಕೆಂಬ ಅರಿವು ಮೂಡಿಸುವ ಸಲುವಾಗಿ ತುಂಗಭದ್ರ ನದಿ ಉಳಿಸಿ ಅಭಿಯಾನದ ಪಾದಯಾತ್ರೆಯಲ್ಲಿ ಗ್ರಾಮ ಪಟ್ಟಣಗಳಲ್ಲಿನ ಜನರಿಗೆ ಜಲಜಾಗೃತಿ ಮೂಡಿಸಲಾಗುತ್ತದೆ.
ತುಂಗ-ಭದ್ರಾ ಹುಟ್ಟು: ಚಿಕ್ಕಮಗಳೂರು ಜಿಲ್ಲೆಯ ಗಂಗಡಿಕಲ್ಲು ಎಂಬಲ್ಲಿ ತುಂಗಾ ಮತ್ತು ಭದ್ರಾ ನದಿಗಳು ಬೇರೆಯಾಗಿ ಹುಟ್ಟುತ್ತವೆ. ತುಂಗಾ ನದಿ ಶೃಂಗೇರಿ ಪಟ್ಟಣದ ಮೂಲಕ ಹರಿದು ನಂತರ ಶಿವಮೊಗ್ಗ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಸುಮಾರು 100 ಕಿ.ಮೀ. ಏಕಾಂಗಿಯಾಗಿ ಹರಿಯುತ್ತದೆ. ಅದೇ ರೀತಿ ಭದ್ರಾ ನದಿ ಚಿಕ್ಕಮಗಳೂರಿನ ಹೊರನಾಡು, ಕಳಸ ಭಾಗದ ಮೂಲಕ ಹರಿದು ಶಿವಮೊಗ್ಗ ಜಿಲ್ಲೆ ಪ್ರವೇಶಿಸುತ್ತದೆ. ಈ ಎರಡೂ ನದಿಗಳು ಶಿವಮೊಗ್ಗ ತಾಲೂಕು ಕೊಡಲಿ ಎಂಬ ಸ್ಥಳದಲ್ಲಿ ಸಂಗಮವಾಗಿ ಮುಂದೆ ತುಂಗಭದ್ರಾ ನದಿಯಾಗಿ ಹರಿಯುತ್ತದೆ. ಕಿಷ್ಕಿಂಧೆಯಿಂದ ರಾಯಚೂರು ಬಳಿ ಮಹಾರಾಷ್ಟ್ರದಿಂದ ಹರಿದು ಬರುವ ಕೃಷ್ಣಾ ನದಿಯನ್ನು ತುಂಗಭದ್ರಾ ಸೇರಿ ಆಂಧ್ರದ ಮೂಲಕ ಬಂಗಾಳಕೊಲ್ಲಿ ಸಮುದ್ರ ಸೇರುತ್ತದೆ.
"ನಿರ್ಮಲ ತುಂಗ-ಭದ್ರ ಅಭಿಯಾನ ಎನ್ನುವ ಬೃಹತ್ ಪಾದಯಾತ್ರೆ ಅಭಿಯಾನವನ್ನು ಶಿವಮೊಗ್ಗದ ಪರಿಯಾವರ್ಣ ಟ್ರಸ್ಟ್ ಹಮ್ಮಿಕೊಂಡಿದೆ. ಶೃಂಗೇರಿಯಿಂದ ಕಿಷ್ಕಿಂಧೆವರೆಗೆ ಸುಮಾರು 430 ಕಿ.ಮೀ. ದೂರದ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ನವೆಂಬರ್ 15ರಂದು ಮೊದಲ ಹಂತದ ಸಮಾರೋಪ ನಡೆಯಲಿದೆ. ಚರಂಡಿ ನೀರು ಶುದ್ಧೀಕರಣ ಘಟಕವನ್ನು ನಗರ ಹಾಗೂ ಗ್ರಾಮಗಳಲ್ಲಿ ಸ್ಥಾಪನೆ ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಮುಖ ಉದ್ದೇಶದಿಂದ ಅಭಿಯಾನದ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ" ಎಂದು ನಿವೃತ್ತ ಉಪನ್ಯಾಸಕ ಕುಮಾರಸ್ವಾಮಿ ಹೇಳಿದ್ದಾರೆ.
"ಜಲ ಮೂಲಗಳಾದ ನದಿ, ಸರೋವರ, ಕೆರೆ, ಜಲಾಶಯ, ಹಳ್ಳಗಳಿರಬಹುದು ಇವುಗಳನ್ನು ನಾವು ಅತೀ ಹೆಚ್ಚು ಕಲುಷಿತಗೊಳಿಸುತ್ತಿದ್ದೇವೆ. ಇದರ ಪರಿಣಾಮ ಮುಂದಿನ ಸಂತತಿಯಲ್ಲಿ ಕಾಣಬಹುದು. ಜಲಮೂಲಗಳ ಬಗ್ಗೆ ನಾವು ಗಂಭೀರವಾಗಿ ಆಲೋಚಿಸಬೇಕಿದೆ. ದೇಶದ ಎಲ್ಲಾ ನದಿಗಳ ಪರಿಸ್ಥಿತಿಯೂ ಇದೇ ರೀತಿ ಆಗುತ್ತಿದೆ. ಇದರಿಂದ ನಮ್ಮನ್ನು ನಾವು ಎಚ್ಚರಿಸಿಕೊಳ್ಳಲು ಇದು ಸದಾವಕಾಶ" ಎಂದು ಪ್ರೊ. ಶ್ರೀಪತಿ ತಿಳಿಸಿದರು.
ಇದನ್ನೂ ಓದಿ:ಯಮುನಾ ನದಿ ಮಾಲಿನ್ಯಕ್ಕೆ ಕಾರಣಗಳೇನು? ತಡೆಗಟ್ಟುವುದು ಹೇಗೆ?: ವಿಶ್ಲೇಷಣೆ