ಮಂಡ್ಯ:ರೈತನ ಮಗ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಸ್ಪರ್ಧಿಸುತ್ತಿರುವುದು ಅನಿರೀಕ್ಷಿತ ಬೆಳವಣಿಗೆ. 2019ರಲ್ಲಿ ಚುನಾವಣೆಯ ಸೋಲಿನ ಆಕ್ರೋಶ ನಮ್ಮ ಕಾರ್ಯಕರ್ತರಲ್ಲಿ ಇದೆ. ರಾಜಕೀಯ ಷಡ್ಯಂತ್ರದಿಂದ ಯುವಕ ಬಲಿಯಾಗಿದ್ದಾನೆ, ಹೀಗಾಗಿ ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದಲ್ಲಿ ಕಣಕ್ಕಿಳಿಸಬೇಕು ಎಂದು ನಮ್ಮ ಮುಖಂಡರು ಮತ್ತು ಕಾರ್ಯಕರ್ತರು ಸಲಹೆಯನ್ನು ನೀಡಿದ್ದರು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಾಗಮಂಗಲ ಪಟ್ಟಣದ ಬಡಗೂಡಮ್ಮ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರೈತರು, ಕಾವೇರಿ ನೀರು ಹಾಗೂ ಅಭಿವೃದ್ದಿಯ ವಿಚಾರದಲ್ಲಿ ಮಂಡ್ಯ ಜಿಲ್ಲೆಗೆ ಅನ್ಯಾಯವಾಗಿದೆ. ಹೀಗಾಗಿ ಕುಮಾರಸ್ವಾಮಿ ಅವರೇ ಮಂಡ್ಯದ ಅಭ್ಯರ್ಥಿಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಕಾರ್ಯಕರ್ತರ ಒತ್ತಡಕ್ಕೆ ಮಣಿದು ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿಕೆ ಬಗ್ಗೆ ಮಾತನಾಡಿ, ನಮ್ಮ ತಂದೆಗೆ ಆರು ವರ್ಷದಲ್ಲಿ ಮೂರು ಬಾರಿ ಶಸ್ತ್ರ ಚಿಕಿತ್ಸೆಯಾಗಿದೆ. ಅದನ್ನೆಲ್ಲಾ ಪ್ರೂವ್ ಮಾಡಬೇಕಾ?. ಮೊಸಳೆ ಕಣ್ಣೀರು ಸುರಿಸಿ, ಅನುಕಂಪದ ಮೇಲೆ ಮತ ಕೇಳುವ ಪ್ರಮೇಯ ನಮಗಿಲ್ಲ. ಜಿಲ್ಲೆಯ ಜನತೆ ನೋಡಿರುತ್ತಾರೆ, ಆ ರೀತಿ ಮಾತನಾಡಬೇಡಿ. ಕುಮಾರಸ್ವಾಮಿ ಬಂದು ಇಲ್ಲಿ ಸ್ಪರ್ಧೆ ಮಾಡ್ತಿರೋದು ಅವರಿಗೆ ಸಹಿಸಲಾಗುತ್ತಿಲ್ಲ. ಹಾಗಾಗಿ ಈ ರೀತಿ ಲಘುವಾದ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಸೂಕ್ತ ಉತ್ತರವನ್ನು ನೀಡುತ್ತಾರೆ ಎಂದು ತಿರುಗೇಟು ನೀಡಿದರು.