ಕರ್ನಾಟಕ

karnataka

ETV Bharat / state

ಸಿಎಂ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಹಾಸನದಲ್ಲಿ ಸಮಾವೇಶ ಮಾಡ್ತಿದ್ದಾರೆ; ನಿಖಿಲ್ ಕುಮಾರಸ್ವಾಮಿ ಟೀಕೆ - HASSAN CONVENTION

ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹಾಸನದಲ್ಲಿ ಸಮಾವೇಶ ಮಾಡ್ತಿದ್ದಾರೆ. ಆದರೆ, ಸರ್ಕಾರದ ಸಾಧನೆಗಳು ಏನಿದೆ ಎಂಬುದು ಜನಸಾಮಾನ್ಯರ ಪ್ರಶ್ನೆ ಆಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಕೈ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

NIKHIL REACTION ON CONVENTION
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (ETV Bharat)

By ETV Bharat Karnataka Team

Published : Nov 30, 2024, 2:09 PM IST

ಬೆಂಗಳೂರು:ರಾಜ್ಯದ ಮುಖ್ಯಮಂತ್ರಿಗಳು ಕುರ್ಚಿ ಬಲಪಡಿಸಿಕೊಳ್ಳೋಕೆ ಹಾಸನದಲ್ಲಿ ಸಮಾವೇಶ ಮಾಡುತ್ತಿದ್ದಾರೆ. ನಿನ್ನೆ ದಿನ ಸ್ವಪಕ್ಷದಲ್ಲಿಯೇ ಪಕ್ಷವನ್ನು ಬಿಟ್ಟು ವೈಯಕ್ತಿಕವಾಗಿ ಸಮಾವೇಶ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಆಕ್ಷೇಪ ಬಂದಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.

ಜೆಪಿ ನಗರ ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರ ಗಮನ ಸೆಳೆಯೋಕೆ ಶಕ್ತಿ ಪ್ರದರ್ಶನ ಸಮಾವೇಶ ಮಾಡ್ತಿದ್ದಾರೆ ಹೊರತು, ಜೆಡಿಎಸ್ ಮತ್ತು ಬಿಜೆಪಿಗೆ ಈ ಸಮಾವೇಶದ ಮೂಲಕ ಏನು ಸಂದೇಶ ಕೊಡೋಕೆ ಅಲ್ಲ ಎಂದರು.

ಯಾವ ಪುರುಷಾರ್ಥಕ್ಕೆ ಸಮಾವೇಶ: ಹಾಸನದಲ್ಲಿ ಸಮಾವೇಶ ಮಾಡುವುದರಿಂದ ಜೆಡಿಎಸ್​ಗೆ ಹಿನ್ನಡೆ ವಿಚಾರಕ್ಕೆ ಮಾತನಾಡಿದ ಅವರು, ಸಮಾವೇಶ ಯಾರು ಎಲ್ಲಿ ಬೇಕಾದರು ಮಾಡಬಹುದು, ಇದ್ರಿಂದ ಹಿನ್ನಡೆ ಆಗುವ ಪ್ರಶ್ನೆ ಇಲ್ಲ. ಚುನಾವಣೆಗೆ ಇನ್ನೂ ಮೂರೂವರೆ ವರ್ಷ ಬಾಕಿ ಇದೆ. ಸಮಾವೇಶ ಯಾವ ಪುರುಷಾರ್ಥಕ್ಕೆ ಮಾಡ್ತಿದ್ದಾರೆ ಗೊತ್ತಿಲ್ಲ ಎಂದರು.

ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಈ ಸಮಾವೇಶ ಮಾಡ್ತಿದ್ದಾರೆ. ಆದರೆ, ಸರ್ಕಾರದ ಸಾಧನೆಗಳು ಏನಿದೆ ಎಂಬುದು ಜನಸಾಮಾನ್ಯರ ಪ್ರಶ್ನೆ ಆಗಿದೆ. ಈ ಸರ್ಕಾರ ಭ್ರಷ್ಟಾಚಾರ ಹಗರಣಗಳಲ್ಲಿ ಮುಳುಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಇತ್ತೀಚಿನ ದಿನಗಳಲ್ಲಿ ಹೊಸಪೇಟೆ ಕಾಂಗ್ರೆಸ್ ಶಾಸಕರೇ ಎರಡು ಗ್ಯಾರಂಟಿ ಕಡಿಮೆ ಮಾಡಿ ನಮಗೆ ಅನುದಾನ ಕೊಡಿ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಒಂದೂವರೆ ವರ್ಷ ಆಗಿದೆ ಆಡಳಿತಕ್ಕೆ ಬಂದು. ಕಾಂಗ್ರೆಸ್ ಶಾಸಕರೇ ಪ್ರತಿಕ್ರಿಯೆ ಕೊಡ್ತಾ ಇರೋದನ್ನ ನೋಡಿದ್ದೇವೆ. ಈ ತರ ಹೇಳಿಕೆ ಕೊಟ್ಟ ಸಂಜೆಯ ಒಳಗೆ ಯೂಟರ್ನ್ ಹೊಡೆಸಿದ್ರು. ಇದು ಕಾಂಗ್ರೆಸ್ ಶಾಸಕರ ಪರಿಸ್ಥಿತಿ ಎಂದು ಕಾಂಗ್ರೆಸ್ ವಿರುದ್ಧ ನಿಖಿಲ್​ ಆಕ್ರೋಶ ವ್ಯಕ್ತಪಡಿಸಿದರು.

ಅನುದಾನ ನೀಡ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಹಾಗಿದ್ದಾಗ ಜೆಡಿಎಸ್-ಬಿಜೆಪಿ ಶಾಸಕರ ಪರಿಸ್ಥಿತಿ ಏನಾಗಿದೆ? ಒಂದು ರೂಪಾಯಿ ಅನುದಾನ ಬಿಡುಗಡೆ ಆಗಿಲ್ಲ. ನಯಾ ಪೈಸೆ ಇವತ್ತು ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಕೊಡ್ತಾ ಇಲ್ಲ. ಈ ಪರಿಸ್ಥಿತಿ ಇವತ್ತು ರಾಜ್ಯದಲ್ಲಿ ಇದೆ ಎಂದು ಕಿಡಿಕಾರಿದರು.

ಹೆಚ್ಚು ಪ್ಯಾಕೇಜ್ ಎಲ್ಲಿ ಸಿಗುತ್ತೊ ಅಲ್ಲಿಗೆ ಯೋಗೇಶ್ವರ್ ಹೋಗ್ತಾರೆ: ಜೆಡಿಎಸ್ ಶಾಸಕರನ್ನ ಕಾಂಗ್ರೆಸ್​ಗೆ ಕರೆತರುವ ಕುರಿತು ಶಾಸಕ ಸಿ ಪಿ ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಅತಿ ಹೆಚ್ಚು ಪ್ಯಾಕೇಜ್ ಅಲ್ಲಿ ಸಿಗುತ್ತೆ ಅಂತ ಕಾಂಗ್ರೆಸ್​ಗೆ ಹೋಗಿದ್ದಾರೆ. ಎಷ್ಟು ದಿನ ಕಾಂಗ್ರೆಸ್​ನಲ್ಲಿ ಉಳಿಯುತ್ತಾರೆ ಅನ್ನೋದು ಪ್ರಶ್ನೆ. ಅವರನ್ನ ನಂಬಿಕೊಂಡು ನಮ್ಮ ಶಾಸಕರು ಕಾಂಗ್ರೆಸ್​ಗೆ ಹೋಗುವ ಪರಿಸ್ಥಿತಿ ಇಲ್ಲ ಎಂದರು.

ನಮ್ಮಲ್ಲಿ ಅಸಮಾಧಾನಿತರು ಇಲ್ಲ:ನಮ್ಮ ಪಕ್ಷದ ಶಾಸಕರು ರಾಜಕೀಯ ಹೊರತುಪಡಿಸಿ ಭಾವನಾತ್ಮಕವಾದ ಸಂಪರ್ಕ ಹೊಂದಿದ್ದಾರೆ. ನನ್ನ ಜೊತೆ ನಮ್ಮ ಶಾಸಕರು ನಿರಂತರ ಸಂಪರ್ಕದಲ್ಲಿದ್ದಾರೆ. ಕ್ಷೇತ್ರದ ಅನುದಾನ ಸಮಸ್ಯೆ ಬಗ್ಗೆಯೂ ಚರ್ಚೆ ಮಾಡುತ್ತಿದ್ದಾರೆ. ನಮ್ಮ ಯಾವುದೇ ಶಾಸಕರು ಅಸಮಾಧಾನಿತರು ಇಲ್ಲ. ಅಸಮಾಧಾನಿತರು ಕಾಂಗ್ರೆಸ್​​ ನಲ್ಲಿ ಹೆಚ್ಚಾಗಿದ್ದಾರೆ. ಕಾಂಗ್ರೆಸ್ ನಲ್ಲಿಯೇ ಆ ಪರಿಸ್ಥಿತಿ ಇದೆ. 139 ಶಾಸಕರನ್ನ ಕಾಂಗ್ರೆಸ್ ಪಕ್ಷ ಉಳಿಸಿಕೊಳ್ಳುವ ಕೆಲಸ ಮಾಡಲಿ ಎಂದು ಹೇಳಿದರು.

ಒಂದು ಸಮುದಾಯ ಓಲೈಕೆಗೆ ಮತ್ತೊಂದು ಸಮುದಾಯ ಟಾರ್ಗೆಟ್: ಒಕ್ಕಲಿಗ ಸ್ವಾಮೀಜಿ ವಿರುದ್ಧ ಎಫ್ಐಆರ್, ನೋಟಿಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ನಿಖಿಲ್​ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ಮೇಲೆ ಒಂದು ಸಮುದಾಯ ಓಲೈಕೆ ಮಾಡಿಕೊಳ್ಳೋಕೆ ಮತ್ತೊಂದು ಸಮುದಾಯವನ್ನ ಟಾರ್ಗೆಟ್ ಮಾಡ್ಕೊಂಡು ಹೋಗ್ತಾ ಇದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನತೆ ಉತ್ತರ ಕೊಡ್ತಾರೆ, ಕಾದು ನೋಡಬೇಕು ಎಂದು ಹೇಳಿದರು.

ಜಿ.ಟಿ. ದೇವೇಗೌಡರ ಅಸಮಾಧಾನ ವಿಚಾರಕ್ಕೆ ಮಾತನಾಡಿ, ಇದು ಇದೇ ಮೊದಲೇನು ಅಲ್ಲ, ಈ ಹಿಂದೆ ವೈಮನಸ್ಸು ಬಂದಾಗ ನಾನೇ ಸೇತುವೆಯಾಗಿ ಕೆಲಸ ಮಾಡಿದ್ದೀನಿ. ಅವರನ್ನ ಮತ್ತೆ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ‌ ಈ ಹಿಂದೆ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಈಗಲೂ ಸಣ್ಣಪುಟ್ಟ ವೈಮನಸ್ಸನ್ನ ಹೊರಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನ ಪಕ್ಷದ ಹಿರಿಯ ಶಾಸಕರು, ನಾವೆಲ್ಲ ಸೇರಿ‌ ಸರಿ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಹಾಸನ ಸಮಾವೇಶಕ್ಕೆ ರಾಹುಲ್​ ಗಾಂಧಿ ಗ್ರೀನ್​ ಸಿಗ್ನಲ್​: ವೈರಲ್​ ಪತ್ರದ ಕುರಿತು ಸಿಎಂ, ಪಕ್ಷದ ನಾಯಕರು ಹೇಳಿದ್ದೇನು?

ABOUT THE AUTHOR

...view details