ರಾಮನಗರ:ಚನ್ನಪಟ್ಟಣದ ಕಾಂಗ್ರೆಸ್ ಹೊಸ ಶಾಸಕರು ಜೆಡಿಎಸ್ ಕಾರ್ಯಕರ್ತರು, ಮುಖಂಡರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ನಿಖಿಲ್, ಕ್ಷುಲ್ಲಕ ವಿಷಯಗಳನ್ನಿಟ್ಟುಕೊಂಡು ವಿರೋಧ ಪಕ್ಷಗಳ ಕಾರ್ಯಕರ್ತರು ಚನ್ನಪಟ್ಟಣದಲ್ಲಿ ನಮ್ಮ ಮುಖಂಡರಿಗೆ ಕಿರುಕುಳ ನೀಡುವುದು ಅಕ್ಷಮ್ಯ. ಪ್ರಜಾಪ್ರಭುತ್ವದಲ್ಲಿ ಇಂತಹ ನಡೆ ಒಳ್ಳೆಯದಲ್ಲ, ಅದನ್ನು ಸಹಿಸುವ ಪ್ರಶ್ನೆಯೂ ಇಲ್ಲ. ಚನ್ನಪಟ್ಟಣದಲ್ಲಿ ಉಪ ಚುನಾವಣೆ ನಂತರ ಜೆಡಿಎಸ್ ಕಾರ್ಯಕರ್ತರನ್ನು ಅಲ್ಲಿನ ಕಾಂಗ್ರೆಸ್ ಪಕ್ಷದ ಹೊಸ ಶಾಸಕರು, ಪೊಲೀಸ್ ಇಲಾಖೆಯ ಮೂಲಕ ಟಾರ್ಗೆಟ್ ಮಾಡಿ ಹಿಂಸಿಸುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ದೂರಿದರು.
ಕೈಕಟ್ಟಿ ಕೂರುವ ಜಾಯಮಾನ ನಮ್ಮದಲ್ಲ:ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡು ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ಕೈಕಟ್ಟಿ ಕೂರುವ ಜಾಯಮಾನ ನಮ್ಮದಲ್ಲ. ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಕಾಂಗ್ರೆಸ್ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುವ ಯಾವುದೇ ಇಲಾಖೆಯ ಅಧಿಕಾರಿಗಳು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ನಿಖಿಲ್ ಎಚ್ಚರಿಕೆ ನೀಡಿದರು.