ರಾಮನಗರ:ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಹೊಂಗನೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಸ್ಥಳೀಯ ಜನರ ಮತ್ತು ರೈತರ ಸಮಸ್ಯೆಗಳನ್ನು ಆಲಿಸಿದರು.
ಇದೇ ವೇಳೆ ಮಾತನಾಡಿದ ಅವರು, "ನಾನು ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ, ಆಕಾಂಕ್ಷಿಯೂ ನಾನಲ್ಲ. ನಾನು ಜನರ ಸಮಸ್ಯೆಯನ್ನು ಆಲಿಸಿ, ಉಪ ಚುನಾವಣೆಗೆ ಬಗ್ಗೆ ಮುಖಂಡರ ಜೊತೆ ಚರ್ಚೆ ಮಾಡಲು ಬಂದಿದ್ದೇನೆ. ಚನ್ನಪಟ್ಟಣ, ಶಿಂಗ್ಗಾವಿ, ಸಂಡೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್ ನಡೆಯಬೇಕಿದೆ. ರಾಜ್ಯದಲ್ಲಿ ಮೂರು ಕ್ಷೇತ್ರದಲ್ಲಿ ಉಪಚುನಾವಣೆ ಬಗ್ಗೆ ಶೀಘ್ರವೇ ದಿನಾಂಕ ಘೋಷಣೆಯಾಗಲಿದೆ" ಎಂದರು.
ನಾನು ಚುನಾವಣೆಗೆ ಸ್ಪರ್ಧೆ ಮಾಡಲು ಇದು ಸೂಕ್ತ ಸಮಯ ಅಲ್ಲ. ರಾಜ್ಯಾದ್ಯಂತ ಕಾರ್ಯಕರ್ತರ ಜೊತೆ ಒಡನಾಟ ಬೆಳೆಸಿಕೊಳ್ಳಬೇಕು ಅಂತ ಕೆಲಸ ಆರಂಭಿಸಿದ್ದೇನೆ ಅಷ್ಟೇ. ಏನಾದರೂ ಜನತಾದಳದ ಚಿನ್ಹೆ ಅಡಿ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಬೇಕು ಎನ್ನುವ ಸಂದರ್ಭ ಬಂದರೆ ನೂರಕ್ಕೆ ನೂರರಷ್ಟು ನಮ್ಮ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಜನರ ಸಮಸ್ಯೆ ಆಲಿಸಲು ಬಂದಿದ್ದೇನೆ:"ಹೆಚ್‌ಡಿ ಕುಮಾರಸ್ವಾಮಿ ಅವರ ಸ್ವ ಕ್ಷೇತ್ರದಲ್ಲಿ ಕೆರೆಗಳು ಖಾಲಿ ಇವೆ. ಜತೆಗೆ ಹಲವಾರು ಸಮಸ್ಯೆಗಳಿವೆ. ಹೀಗಾಗಿ ಜನರ ಸಮಸ್ಯೆ ಆಲಿಸಲು ನಾನು ಬಂದಿದ್ದೇನೆ. ಚನ್ನಪಟ್ಟಣದಲ್ಲಿ NDA ಅಭ್ಯರ್ಥಿಗೆ ಗೆಲುವಾಗಬೇಕು. ಹೀಗಾಗಿ ತಳಮಟ್ಟದಿಂದ ಎರಡೂ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಈಗಾಗಲೇ ಚನ್ನಪಟ್ಟಣ ಕ್ಚೇತ್ರಕ್ಕೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಿದ್ದೇವೆ. ಆ ವರದಿಯನ್ನು ಬಿಜೆಪಿ ರಾಷ್ಟ್ರೀಯ ನಾಯಕರ ಗಮನಕ್ಕೆ ಕುಮಾರಸ್ವಾಮಿ ತರುತ್ತಾರೆ" ಎಂದು ತಿಳಿಸಿದರು.