ಬೆಂಗಳೂರು:ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಕೊಳಕು ಬಟ್ಟೆ ಧರಿಸಿದ ರೈತನ ಪ್ರವೇಶಕ್ಕೆ ಅವಕಾಶ ನಿರಾಕರಿಸಿ, ಅವಮಾನಿಸಿದ ಪ್ರಕರಣದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಹೆಚ್ಆರ್ಸಿ) ನಮ್ಮ ಮೆಟ್ರೋ ಆಡಳಿತ ಮಂಡಳಿ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಮೆಟ್ರೋ ನಿಲ್ದಾಣದಲ್ಲಿ ರೈತನ ಪ್ರವೇಶ ನಿರಾಕರಿಸಿದ ಘಟನೆ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ಪ್ರಕರಣ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಎನ್ಹೆಚ್ಆರ್ಸಿ ದೂರು ದಾಖಲು ಮಾಡಿಕೊಂಡು, ಪ್ರಕರಣದ ಬಗ್ಗೆ ವರದಿ ನೀಡುವಂತೆ ಬಿಎಂಆರ್ಸಿಎಲ್ ವ್ಯವಸ್ಥಾಪಕರಿಗೆ ಸೂಚಿಸಿದೆ.
ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಕಳೆದ ಸೋಮವಾರದಂದು ಘಟನೆ ನಡೆದಿತ್ತು. ಮೆಟ್ರೋ ರೈಲಿನತ್ತ ಪ್ರವೇಶಿಸಲು ರೈತ ಮುಂದಾದಾಗ ಅಲ್ಲಿನ ಸಿಬ್ಬಂದಿ ರೈತ ಕೊಳಕು ಉಡುಪು ಧರಿಸಿದ ಹಾಗೂ ಮಾಸಿದ ಬಟ್ಟೆಯ ಗಂಟು ಇರುವುದನ್ನು ಗಮನಿಸಿ, ರೈಲಿನ ರಕ್ಷಣಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದರು. ಈ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.