ಬೆಂಗಳೂರು: 2025ನೇ ವರ್ಷವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಜನರು ತುದಿಗಾಲಲ್ಲಿ ನಿಂತಿದ್ದಾರೆ. ನೂತನ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಇದಕ್ಕಾಗಿ ರಾಜಧಾನಿಯ ಪ್ರತಿಷ್ಠಿತ ತಾಣಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ. ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್, ಮಾರತ್ತಹಳ್ಳಿ ರಸ್ತೆಗಳು ವಿದ್ಯುತ್ ಅಲಂಕಾರದಿಂದ ಜಗಮಗಿಸುತ್ತಿವೆ. ಹೋಟೆಲ್, ಪಬ್, ಹೋಂ ಸ್ಟೇ ಜೊತೆಗೆ ಕಾರ್ಪೊರೇಟ್ ಕಂಪನಿ ಪಾರ್ಟಿಗಳ ಜೊತೆಗೆ ಮನೆಗಳಲ್ಲೂ ಪಾರ್ಟಿಯನ್ನು ಆಯೋಜನೆ ಮಾಡಿಕೊಳ್ಳಲಾಗಿದೆ.
ಈಗಾಗಲೇ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌ಗಳಲ್ಲಿ ಕಟ್ಟಡ, ಮರಗಳನ್ನು ವಿದ್ಯುತ್ ದೀಪಗಳಿಂದ ವಿಶೇಷವಾಗಿ ಅಲಂಕೃತಗೊಳಿಸಲಾಗಿದೆ. ಪಾರ್ಟಿಗಳಿಗೆ ಅನುಕೂಲವಾಗುವಂತ ಸೆಟ್‌ಗಳನ್ನು ಹೋಟೆಲ್‌ಗಳಲ್ಲಿ ಅಳವಡಿಸಲಾಗಿದೆ. ಬೃಹತ್ ಸ್ಕ್ರೀನಗಳನ್ನು ಅಳವಡಿಸಿ ಪಾರ್ಟಿಯ ಮತ್ತು ಏರಿಸಲು ಬೇಕಾದಂತ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಜೊತೆಗೆ ಪಬ್, ರೆಸ್ಟೋರೆಂಟ್‌ಗಳಲ್ಲಿ ಪಾರ್ಟಿ ಆಯೋಜನೆ ಬಗ್ಗೆ ವಿಚಾರಿಸುವುದು, ಮುಂಗಡ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ.