ನೇಹಾ ಕೊಲೆ ಪ್ರಕರಣ: ಆರೋಪಿ ಫಯಾಜ್ ವಶಕ್ಕೆ ಪಡೆದ ಸಿಐಡಿ, ಘಟನಾ ಸ್ಥಳದ ಮಹಜರು ಹುಬ್ಬಳ್ಳಿ-ಧಾರವಾಡ:ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ತಂಡ, ಆರೋಪಿ ಫಯಾಜ್ನನ್ನು ವಶಕ್ಕೆ ಪಡೆದುಕೊಂಡಿದೆ. ಆರು ದಿನಗಳ ಕಾಲ ಆರೋಪಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು, ಕೊಲೆ ನಡೆದ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣಕ್ಕೆ ಬುಧವಾರ ಕರೆದುಕೊಂಡು ಬಂದು ಮಹಜರು ಮಾಡಿದರು.
ಧಾರವಾಡ ಕೇಂದ್ರ ಕಾರಾಗೃಹದಿಂದ ಆರೋಪಿಯನ್ನು ಬುಧವಾರ ವಶಕ್ಕೆ ಪಡೆದ ಬಳಿಕ, ಆರೋಗ್ಯ ತಪಾಸಣೆ ಮಾಡಿಸಿದ ಸಿಐಡಿ ಅಧಿಕಾರಿಗಳು ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿಗೆ ಕರೆತಂದರು. ಆರೋಪಿಯ ಆರೋಗ್ಯ ತಪಾಸಣೆಯು ಪೊಲೀಸ್ ಹೆಡ್ಕ್ವಾರ್ಟರ್ಸ್ನಲ್ಲಿನ ಆಸ್ಪತ್ರೆಯಲ್ಲಿ ನಡೆಯಿತು. ಜೈಲಿನಿಂದ ನೇರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ತಪಾಸಣೆ ಮಾಡಿಸಲಾಯಿತು.
ಬಿವಿಬಿ ಕಾಲೇಜಿನಲ್ಲಿ ಸ್ಥಳ ಮಹಜರುಗಾಗಿ ಮೊದಲೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಫಯಾಜ್ ಕರೆತಂದ ಸಿಐಡಿ ಅಧಿಕಾರಿಗಳು, ಘಟನಾ ಸ್ಥಳದಲ್ಲಿ ಆರೋಪಿ ಕಡೆಯಿಂದ ಮಾಹಿತಿ ಪಡೆದರು. ಸಿಐಡಿ ಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ಮಹಜರು ಕಾರ್ಯ ನಡೆಯಿತು.
ಎಬಿವಿಪಿ ಕಾರ್ಯಕರ್ತರು-ಪೊಲೀಸ್ ನಡುವೆ ಮಾತಿನ ಚಕಮಕಿ:ಈ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾದರು. ಆಗ ಪೊಲೀಸರು ಹಾಗೂ ಎಬಿವಿಪಿ ಕಾರ್ಯಕರ್ತರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಕಾರ್ಯಕರ್ತರು ಆರೋಪಿ ಫಯಾಜ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರನ್ನು ಮನವೊಲಿಸಲು ಪೊಲೀಸರು ಹರಸಾಹಸಪಡಬೇಕಾಯಿತು.
6 ದಿನ ಸಿಐಡಿ ಕಸ್ಟಡಿಗೆ: ಮಂಗಳವಾರದಿಂದ ತನಿಖೆ ಆರಂಭಿಸಿರುವ ಎಸ್ಪಿ ವೆಂಕಟೇಶ್ ನೇತೃತ್ವದ ತಂಡ, ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಇಲ್ಲಿನ ಒಂದನೇ ಜೆಎಂಎಫ್‌ಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ಪುರಸ್ಕರಿಸಿದ ನ್ಯಾಯಾಲಯವು 6 ದಿನಗಳ ಕಾಲ ಆರೋಪಿಯನ್ನು ಸಿಐಡಿ ಕಸ್ಟಡಿಗೆ ಒಪ್ಪಿಸಿದೆ.
ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧ ಮಂಗಳವಾರ ಸಿಐಡಿ ವಿಭಾಗದ ಪೊಲೀಸರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತರು ಕಡತಗಳನ್ನು ಹಸ್ತಾಂತರಿಸಿದ್ದಾರೆ. ಸಿಐಡಿ ಎರಡು ತಂಡಗಳಲ್ಲಿ ತನಿಖೆ ಆರಂಭಿಸಿದ್ದು, ಒಂದು ತಂಡ ಹತ್ಯೆ ನಡೆದ ಸ್ಥಳ ಬಿವಿಬಿ ಕಾಲೇಜು ಆವರಣದಲ್ಲಿ ಪರಿಶೀಲನೆ ನಡೆಸಿದರೆ, ಇನ್ನೊಂದು ತಂಡ ಆರೋಪಿಯ ಊರು ಮುನವಳ್ಳಿಗೆ ತೆರಳಿ ಮಾಹಿತಿ ಕಲೆ ಹಾಕಿದೆ.
ಸೋಮವಾರ ರಾತ್ರಿ ನಗರಕ್ಕೆ ಆಗಮಿಸಿದ್ದ ಎಸ್ಪಿ ವೆಂಕಟೇಶ್ ನೇತೃತ್ವದ ಸಿಐಡಿ ತಂಡ, ಮಂಗಳವಾರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಕಚೇರಿಗೆ ಭೇಟಿ ನೀಡಿ ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡಿತ್ತು. ನಂತರ ವಿದ್ಯಾನಗರ ಠಾಣೆಗೆ ಹಾಗೂ ಪ್ರಕರಣದ ತನಿಖಾಧಿಕಾರಿ ಉತ್ತರ ವಿಭಾಗದ ಎಸಿಪಿ ಶಿವಪ್ರಕಾಶ ನಾಯ್ಕ ಕಚೇರಿಗೆ ತೆರಳಿ ಈವರೆಗಿನ ತನಿಖಾ ವಿವರಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್ನಲ್ಲಿ ಏಪ್ರಿಲ್ 18 ರಂದು ಸಂಜೆ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ನಡೆದಿತ್ತು. ಪ್ರಕರಣ ಸಂಬಂಧ ಆರೋಪಿ ಫಯಾಜ್ನನ್ನು ಪೊಲೀಸರು ಬಂಧಿಸಿದ್ದರು. ಆರೋಪಿ ಪತ್ತೆಗೆ ಹಿರಿಯ ಅಧಿಕಾರಿಗಳಾದ ಎಸಿಪಿ ಶಿವಪ್ರಕಾಶ ನಾಯ್ಕ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಡಿ.ಕೆ. ಪಾಟೀಲ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ಕೊಲೆ ಖಂಡಿಸಿ ಬಿಜೆಪಿ ಹಾಗೂ ಇತರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿವೆ. ರಾಜ್ಯ ಸರ್ಕಾರವು ಸೋಮವಾರ (ಏ.22) ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಆದೇಶ ಹೊರಡಿಸಿತ್ತು.
ಓದಿ:'ವೆರಿ ಸಾರಿ, ನಿಮ್ಮೊಂದಿಗೆ ನಾವಿದ್ದೇವೆ': ಫೋನ್ ಮಾಡಿ ನೇಹಾ ತಂದೆಗೆ ಧೈರ್ಯ ತುಂಬಿದ ಸಿಎಂ - Neha Hiremath Murder Case