ಹುಬ್ಬಳ್ಳಿ: ''ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನೇಹಾ ತಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಮನವಿ ಮಾಡಿದ್ದಾರೆ'' ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನಿನ್ನೆ ಅಮಿತ್ ಶಾ ಬಹಿರಂಗ ಸಭೆಯ ಬಳಿಕ ನೇಹಾ ಪೋಷಕರ ಮನವಿ ಮೇರೆಗೆ ಅಮಿತ್ ಶಾರನ್ನು ಭೇಟಿ ಮಾಡಿಸಲಾಗಿತ್ತು. ಈ ವೇಳೆ ನಿರಂಜನ ಹಿರೇಮಠ ದಂಪತಿ ಹಲವಾರು ವಿಚಾರಗಳನ್ನು ಹೇಳಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಅಮಿತ್ ಶಾ ಭರವಸೆ ಕೊಟ್ಟಿದ್ದಾರೆ'' ಎಂದರು.
''ನೇಹಾ ಪೋಷಕರು ನಮಗೆ ತ್ವರಿತ ನ್ಯಾಯ ಬೇಕು, ಹಾಗಾಗಿ ಸಿಬಿಐಗೆ ಪ್ರಕರಣವನ್ನು ಕೊಡಿ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತ್ ಶಾ, ನಾವಾಗಿಯೇ ಸಿಬಿಐ ತನಿಖೆ ಕೈಗೊಳ್ಳಲು ಬರಲ್ಲ. ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಅಥವಾ ಕೋರ್ಟ್ ನಿರ್ದೇಶನ ಕೊಡಬೇಕು. ಹಾಗಾದಲ್ಲಿ ಮಾತ್ರ ಸಿಬಿಐ ತನಿಖೆ ಸಾಧ್ಯ. ಯಾವುದೇ ಸಂದರ್ಭದಲ್ಲಿಯೂ ನಿಮ್ಮ ಜೊತೆ ಇರುತ್ತೇವೆ ಎಂಬ ಭರವಸೆ ನೀಡಿದ್ದಾರೆ'' ಎಂದು ಜೋಶಿ ತಿಳಿಸಿದರು.