ಬೆಂಗಳೂರು :ವಿಧಾನ ಪರಿಷತ್ಗೆ ನಡೆಯಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ - ಬಿಜೆಪಿ ಮೈತ್ರಿ (NDA) ಅಭ್ಯರ್ಥಿಯಾದ ಎ ಪಿ ರಂಗನಾಥ್ ಅವರು ಇಂದು ಚುನಾವಣಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರು, ಬಿಜೆಪಿ ಹಿರಿಯ ನಾಯಕರು ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥ ನಾರಾಯಣ್ ಅವರು, ಬಿಜೆಪಿ ಕೋರ್ ಕಮಿಟಿ ಅಧ್ಯಕ್ಷರಾದ ಜಿ. ಟಿ ದೇವೇಗೌಡರು ಮತ್ತಿತರ ನಾಯಕರು ಉಪಸ್ಥಿತರಿದ್ದರು.
ನಂತರ ಮಾಧ್ಯಮದವರ ಜೊತೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಎರಡೂ ಪಕ್ಷದ ನಾಯಕರು ರಂಗನಾಥ್ ಅವರನ್ನು ಆಯ್ಕೆ ಮಾಡಿದ್ದಾರೆ. ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ರಂಗನಾಥ್ ಅವರು ಅಶ್ವತ್ಥ ನಾರಾಯಣ ಹಾಗೂ ಜಿ. ಟಿ ದೇವೇಗೌಡರ ಆಶೀರ್ವಾದದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇದು ಮುಂದಿನ ರಾಜಕೀಯ ತಿರುವು ಪಡೆದುಕೊಳ್ಳಲಿದೆ. ಶಿಕ್ಷಕರಿಗೆ ಮನವಿ ಮಾಡ್ತೇವೆ. ಈ ಸರ್ಕಾರ ಶಿಕ್ಷಣ ಇಲಾಖೆಯಲ್ಲಿರುವ ಲೋಪದೋಷಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ. ಆಡಳಿತ ಪಕ್ಷದ ಶಾಸಕ ಗಣರಾಜ್ಯೋತ್ಸವ ಸಂದರ್ಭದಲ್ಲಿ ಮಹಿಳಾ ಶಿಕ್ಷಕಿ ಜೊತೆ ಹೇಗೆ ವರ್ತಿಸಿದ್ದಾರೆ ಎಂದು ನೋಡಿದ್ದೇವೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. 2006 -7ರಲ್ಲಿ ನಡೆದ ಪರ್ವ ಮತ್ತೆ ರಾಜ್ಯದಲ್ಲಿ ಆರಂಭವಾಗಲಿದೆ. ಕರ್ನಾಟಕದ ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.