ಶಿವಮೊಗ್ಗ: ನಕ್ಸಲ್ ನಾಯಕ ಬಿ ಜೆ ಕೃಷ್ಣಮೂರ್ತಿ ಅವರನ್ನು ಪೊಲೀಸರು ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇಂದು ಬೆಳಗ್ಗೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸರು ನ್ಯಾಯಾಲಯಕ್ಕೆ ಕೃಷ್ಣಮೂರ್ತಿ ಅವರನ್ನು ಹಾಜರು ಪಡಿಸಿದರು. ಇವರ ಮೇಲೆ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು ಐದು ಪ್ರಕರಣಗಳಿವೆ. ತೀರ್ಥಹಳ್ಳಿ ನ್ಯಾಯಾಲಯದಲ್ಲಿ ಎರಡು ಪ್ರಕರಣ ಹಾಗೂ ಶಿವಮೊಗ್ಗ ನ್ಯಾಯಾಲಯದಲ್ಲಿ ಮೂರು ಪ್ರಕರಣಗಳಿವೆ.
ತೀರ್ಥಹಳ್ಳಿ ನ್ಯಾಯಾಲಯದಲ್ಲಿ ಕಾಡಿನಲ್ಲಿ ಅಕ್ರಮ ಓಡಾಟ, ಬೆದರಿಕೆ ಪ್ರಕರಣಗಳಿವೆ. ಶಿವಮೊಗ್ಗ ನ್ಯಾಯಾಲಯದಲ್ಲಿ ಆಗುಂಬೆ ಅರಣ್ಯ ಚೆಕ್ ಪೋಸ್ಟ್ ಸುಟ್ಟು ಹಾಕಿದ ಪ್ರಕರಣ, ಎರಡನೇಯದು ಬಿದರಗೋಡಿನ ಅರುಣ್ ಮನೆ ದರೋಡೆ ಪ್ರಕರಣ ಹಾಗೂ ಹೊಸಗದ್ದೆ ಬಳಿ ಕೆಎಸ್ಆರ್ಟಿಸಿ ಬಸ್ ಸುಟ್ಟ ಪ್ರಕರಣಗಳು ಇವರ ಮೇಲಿವೆ. ಇಂದು ಚೆಕ್ ಪೋಸ್ಟ್ ಸುಟ್ಟ ಪ್ರಕರಣ ಹಾಗೂ ದರೋಡೆ ಪ್ರಕರಣ ಸಂಬಂಧ ಅವರನ್ನು ನ್ಯಾಯಾಧೀಶ ಮಂಜುನಾಥ್ ರವರ ಮುಂದೆ ಹಾಜರು ಪಡಿಸಲಾಗಿಯಿತು.
ಈ ಕುರಿತು ಮಾತನಾಡಿದ ಬಿ ಜೆ ಕೃಷ್ಣಮೂರ್ತಿ ರವರ ಪರ ವಕೀಲ ಶ್ರೀಪಾಲ್, "ನಕ್ಸಲ್ ಆರೋಪ ಹೂತ್ತ ಬಿ ಜೆ ಕೃಷ್ಣಮೂರ್ತಿ ಅವರನ್ನು ಇಂದು ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಪ್ರಕರಣಗಳ ಕುರಿತು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. 2007ರಲ್ಲಿ ಒಂದು ಪ್ರಕರಣ ಹಾಗೂ 2009 ರಲ್ಲಿ ಎರಡು ಪ್ರಕರಣಗಳು ನಡೆದಿದ್ದವು. ಈ ಪ್ರಕರಣಗಳಲ್ಲಿ ಈಗಾಗಲೇ ಇತರೆ ಆರೋಪಿಗಳ ವಿಚಾರಣೆ ಮುಗಿದು ಅವರು ಬಿಡುಗಡೆ ಆಗಿದ್ದಾರೆ" ಎಂದರು.
"ಬಿ ಜೆ ಕೃಷ್ಣಮೂರ್ತಿರವರು 2021ರ ನವೆಂಬರ್ನಲ್ಲಿ ವೈಯನಾಡು ಪೊಲೀಸರಿಂದ ಅರೆಸ್ಟ್ ಆಗುತ್ತಾರೆ. ಇವರನ್ನು ಕೇರಳ ಜೈಲ್ನಲ್ಲಿ ಇಡಲಾಗಿತ್ತು. ಆಗುಂಬೆ ಪೊಲೀಸ್ ಠಾಣೆಯ ಮೂರು ಪ್ರಕರಣಗಳಲ್ಲಿ ಇಂದು ಕೋರ್ಟ್ಗೆ ಹಾಜರು ಪಡಿಸಲಾಗಿತ್ತು. ಇಂದು ಎರಡು ಪ್ರಕರಣಗಳಲ್ಲಿ ಜಾರ್ಜ್ ಆಗಿದೆ. ಇನ್ನೂಂದು ಪ್ರಕರಣದಲ್ಲಿ ನಾಳೆ ಮತ್ತೆ ಕೋರ್ಟ್ಗೆ ಹಾಜರಾಗಬೇಕಿದೆ. ಇದರಿಂದ ಇಂದು ಇವರನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗುತ್ತದೆ. ನಾಳೆ ಕೆಎಸ್ಆರ್ಟಿಸಿ ಬಸ್ ಸುಟ್ಟ ಪ್ರಕರಣ ಸಂಬಂಧ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ" ಎಂದು ತಿಳಿಸಿದರು.