ಕರ್ನಾಟಕ

karnataka

ETV Bharat / state

ಜವಾಹರ‌ಲಾಲ್ ನೆಹರು ತಾರಾಲಯದಲ್ಲಿ ಗಮನ ಸೆಳೆದ ಚಂದ್ರಯಾನ-3 ಮಾದರಿ - National Space Day - NATIONAL SPACE DAY

ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಇಂದು ಚಂದ್ರಯಾನ-3 ಯೋಜನೆಯ ಮತ್ತು ಭೂಮಿ ಹಾಗೂ ಚಂದ್ರನನ್ನು ಹೋಲುವ ಮಾದರಿಯನ್ನು ಬೆಂಗಳೂರಿನ ಜವಾಹರ‌ಲಾಲ್ ನೆಹರು ತಾರಾಲಯದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

ಜವಾಹರ‌ಲಾಲ್ ನೆಹರು ತಾರಾಲಯ
ಜವಾಹರ‌ಲಾಲ್ ನೆಹರು ತಾರಾಲಯ (ETV Bharat)

By ETV Bharat Karnataka Team

Published : Aug 23, 2024, 9:43 PM IST

Updated : Aug 23, 2024, 10:24 PM IST

ಜವಾಹರ‌ಲಾಲ್ ನೆಹರು ತಾರಾಲಯ (ETV Bharat)

ಬೆಂಗಳೂರು: ಬಾಹ್ಯಾಕಾಶಕ್ಕೆ ಕಳುಹಿಸುವ ರಾಕೆಟ್​ಗಳು ಭೂಮಿಯಿಂದ ನೇರವಾಗಿ ತನ್ನ ಗಮ್ಯ ಸ್ಥಳ ಸೇರುತ್ತವೆ ಎನ್ನುವುದು ಅನೇಕರಿಗಿರುವ ಮಾಹಿತಿ. ಆದರೆ ಅದು ಭೂಮಿಯ ಸುತ್ತ ಸುತ್ತಿ ಗುರುತ್ವಾಕರ್ಷಣೆಯನ್ನು ಬಳಸಿಕೊಂಡು ನಮ್ಮ ವಾತಾವರಣವನ್ನು ಬಿಟ್ಟು ಅಂತರಿಕ್ಷಕ್ಕೆ ಹಾರುತ್ತವೆ. ಇದನ್ನು ಮನಮುಟ್ಟುವ ರೀತಿಯಲ್ಲಿ ತಿಳಿಹೇಳಲು ಚಂದ್ರಯಾನ-3 ಯೋಜನೆಯ ಮತ್ತು ಭೂಮಿ ಹಾಗೂ ಚಂದ್ರನನ್ನು ಬಹುತೇಕ ಹೋಲುವ ಮಾಡೆಲ್ ಅನ್ನು ಇಂದಿನ ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಜವಾಹರ‌ಲಾಲ್ ನೆಹರು ತಾರಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.

ಭೂಮಿ ಮತ್ತು ಚಂದ್ರನ ಮಾಡೆಲ್ (ETV Bharat)

ಯಂಗ್ ಇನ್ನೊವೇಟರ್ಸ್ ಎನ್ನುವ 15ರಿಂದ 16 ಜನಗಳ ತಂಡ ಈ ಮಾದರಿಯನ್ನು ಸುಮಾರು 25 ದಿನಗಳ ಕಾಲ ಶ್ರಮವಹಿಸಿ ತಯಾರಿಸಿದೆ. ಚಂದ್ರಯಾನ-3ರ ರಾಕೆಟ್, ಲ್ಯಾಂಡರ್, ಬೂಸ್ಟರ್ ವ್ಯವಸ್ಥೆ, ಭೂಮಿ ಮತ್ತು ಚಂದ್ರನನ್ನು ಯಥಾವತ್ತಾಗಿ ಹೋಲುವ ಮಾಡೆಲ್ ವಿದ್ಯಾರ್ಥಿಗಳ ಗಮನ ಸೆಳೆಯಿತು. 8 ಅಡಿ ಅಳತೆಯಲ್ಲಿ ಭೂಮಿಯನ್ನು ಮತ್ತು 2 ಅಡಿಯ ಚಂದ್ರನನ್ನು ತೋರಿಸಲಾಗಿದ್ದು, ಒಟ್ಟಾರೆ ಮಾಡೆಲ್ ಸುತ್ತಳತೆ 20 ಅಡಿಯಾಗಿದೆ.

ಅಕ್ರಿಲಿಕ್ ಬಳಸಿಕೊಂಡು ಆರ್ಬಿಟ್ ಅನ್ನು ನಿರ್ಮಿಸಲಾಗಿದೆ. ಅಡ್ರಸ್ಸೇಬಲ್ ಎಲ್​ಇಡಿಗಳನ್ನು ಬಳಸಿಕೊಂಡು ಚಲಿಸುವ ಬೆಳಕನ್ನು ಸೃಷ್ಟಿಸಿ ರಾಕೆಟ್ ಹಾರಾಟದ ದಾರಿಯನ್ನು ತೋರಿಸಲಾಗಿದೆ. ಇನ್ಫ್ಲೇಟೆಬಲ್ ಭೂಮಿಯನ್ನು ಮತ್ತು ಚಂದ್ರನನ್ನು ಇಡಲಾಗಿದೆ. ಹಲವಾರು ಫೈಬರ್, ಲೋಹದ ವಸ್ತುಗಳನ್ನು ಬಳಸಿಕೊಂಡು ಉಳಿದ ಇತರ ಚಂದ್ರಯಾನ-3 ಯೋಜನೆಯ ರಾಕೆಟ್, ಲ್ಯಾಂಡರ್, ರೋವರ್, ಬೂಸ್ಟರ್ ಅನ್ನು ಮಾಡೆಲ್ ರೂಪದಲ್ಲಿ ತೋರಿಸಲಾಯಿತು.

ಆದಿತ್ಯ ಎಲ್-1ರ ಮಾಡೆಲ್ (ETV Bharat)

"ನಾಸಾದ ಹಲವು ಬಾಹ್ಯಾಕಾಶ ನೌಕೆಗಳು ನೇರವಾಗಿ ನಮ್ಮ ವಾತಾವರಣವನ್ನು ಛೇದಿಸಿ ಹೋದ ಉದಾಹರಣೆಗಳು ಸಾಕಷ್ಟಿವೆ. ಆದರೆ ಸಾಕಷ್ಟು ಖರ್ಚು ಮತ್ತು ಶ್ರಮವನ್ನು ತಪ್ಪಿಸಲು ಮುಖ್ಯವಾಗಿ ಚಂದ್ರಯಾನ-3 ಮಿಷನ್​ನಲ್ಲಿ ಇಸ್ರೋ ಭೂಮಿಯ ಮತ್ತು ಚಂದ್ರನ ಗುರುತ್ವಾಕರ್ಷಣೆ ಶಕ್ತಿಯನ್ನು ಬಳಸಿಕೊಂಡು ಕೊಂಚ ತಡವಾಗಿಯಾದರೂ ಸುರಕ್ಷಿತವಾಗಿ ಲ್ಯಾಂಡರ್ ಅನ್ನು ಅದು ಯಾರೂ ತಲುಪದ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿತ್ತು. ಇದನ್ನು ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವ ಉದ್ದೇಶದಿಂದ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ" ಎಂದು ಯಂಗ್ ಇನ್ನೊವೇಟರ್ಸ್ ಸಂಸ್ಥೆಯ ಸಂಸ್ಥಾಪಕ ಎ.ಜೆ.ಭರತ್ ತಿಳಿಸಿದರು.

ಚಂದ್ರಯಾನ- 3ರ ಮಾಡೆಲ್ (ETV Bharat)

"ಈ ಮಾಡೆಲ್ ತಯಾರಿಸುವ ಮೊದಲು ಆದಿತ್ಯ ಎಲ್-1 ಮಾದರಿಯನ್ನು ಸಹ ನಿರ್ಮಿಸಿ ತಾರಾಲಯದಲ್ಲಿ ಪ್ರದರ್ಶಕ್ಕಿಡಲಾಗಿತ್ತು. ಗ್ರಾವಿಟಿ ವೆಲ್ ಅನ್ನು ಸಹ ನಿರ್ಮಿಸಲಾಗಿದೆ. ಆದಿತ್ಯ ಎಲ್-1 ಮಾಡೆಲ್ ಮಾಡುವುದು ಈಗಿನ ಚಂದ್ರಯಾನ-3ರ ಮಾಡೆಲ್ ನಿರ್ಮಿಸುವುದಕ್ಕಿಂತ ಕಷ್ಟದ ಕೆಲಸವಾಗಿತ್ತು. ಅಲ್ಲಿ ನೌಕೆ ಎಲ್ಲಿಯೂ ಲ್ಯಾಂಡ್ ಆಗದೇ ಸೂರ್ಯನ ಸುತ್ತ ಸುತ್ತುವುದನ್ನು ಯಥಾವತ್ತಾಗಿ ತೋರಿಸುವ ಕೆಲಸ ಸವಾಲಿನ ಕೆಲಸವಾಗಿತ್ತು" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ನೆಹರು ತಾರಾಲಯದಲ್ಲಿ ಆದಿತ್ಯ ಎಲ್-1 ಉಪಗ್ರಹದ ನೈಜ ಪ್ರತಿರೂಪ ಅಳವಡಿಕೆ: ಸಚಿವ ಭೋಸರಾಜು - National Space Day

Last Updated : Aug 23, 2024, 10:24 PM IST

ABOUT THE AUTHOR

...view details