ಹುಬ್ಬಳ್ಳಿ :ರೈತರ ಬದುಕು ಹಸನಾಗಿಸುವ ದೃಷ್ಠಿಯಿಂದ ರೈತರನ್ನು ಸ್ವಾವಲಂಬಿಯನ್ನಾಗಿ ಮಾಡುವ ಸದುದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಜಾನುವಾರು ಮಿಷನ್ (NLM) ಯೋಜನೆ ಜಾರಿಗೆ ತಂದಿದೆ.
ಈ ಯೋಜನೆಯ ಸೌಲಭ್ಯ ಪಡೆಯಲು ದೇಶದ ಎಲ್ಲಾ ರಾಜ್ಯಗಳಿಂತಲೂ ಕರ್ನಾಟಕದಿಂದ ಅತೀ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಯೋಜನೆಗೆ ಅರ್ಜಿ ಸಲ್ಲಿಕೆಯಲ್ಲಿ ದೇಶದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಅದರಂತೆ ಈಗಾಗಲೇ ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯಾದ್ಯಂತ ಸಾಕಷ್ಟು ರೈತರು ಅರ್ಜಿ ಸಲ್ಲಿಸಿದ್ದಾರೆ. ಆದರೆ ರೈತರು ಸಲ್ಲಿಸಿದ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಎನ್ಎಲ್ಎಂ ಸ್ಕೀಂ ಮತ್ತು ಅದರ ವಿಶೇಷತೆ ?ಕೇಂದ್ರ ಸರ್ಕಾರ ಅಸಂಘಟಿತ ವಲಯದಲ್ಲಿನ ರೈತರು, ಉದ್ಯಮಿಗಳನ್ನು ಸಂಘಟಿತ ವಲಯಕ್ಕೆ ಕರೆದೊಯ್ಯುವುದೇ ಈ ಯೋಜನೆ ಉದ್ದೇಶವಾಗಿದೆ. ಜಾನುವಾರು ಉತ್ಪನ್ನ (ಹಾಲು, ಮಾಂಸ, ಮೊಟ್ಟೆ, ಉಣ್ಣೆಗಳ ಉತ್ಪಾದನೆ ಹೆಚ್ಚಿಸುವುದು, ಅಲ್ಲದೇ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಮೌಲ್ಯವರ್ಧಿತ ಜಾನುವಾರುಗಳ ಉತ್ಪನ್ನಗಳನ್ನು ಒದಗಿಸುವುದಾಗಿದೆ. ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡುವುದು ಮತ್ತು ರೈತರ ಆದಾಯ ದ್ವಿಗುಣಗೊಳಿಸುವ ಸದ್ದುದೇಶ ಹೊಂದಿದೆ).
ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಗೆ ಅರ್ಜಿ ಸಲ್ಲಿಸಿದ ರೈತ ಯಲ್ಲಪ ಯಲಿವಾಳ ಹಾಗೂ ಗುರು ಭದ್ರಾಪುರ ಮಾತನಾಡಿದರು (ETV Bharat) ಯಾವೆಲ್ಲ ಸಾಲ, ಸಹಾಯಧನ ಪಡೆಯಬಹುದು :ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ರೈತರು ಸ್ವ- ಉದ್ಯೋಗ ಮಾಡಲು ಸಾಲ ಮತ್ತು ಸಹಾಯಧನ ಪಡೆಯಬಹುದಾಗಿದೆ. ಗಾಮೀಣ ಭಾಗದಲ್ಲಿ ಕೋಳಿ ಸಾಕಣೆ, ಕುರಿ, ಮೇಕೆ, ಹಂದಿ ಸಾಕಣೆ ಮತ್ತು ರಸಮೇವು ಉತ್ಪಾದನೆ ಘಟಕಗಳನ್ನು ಆರಂಭಿಸಲು ಆರ್ಥಿಕ ನೆರವು ನೀಡಲಾಗುತ್ತದೆ.
ಸಹಾಯಧನ ಎಷ್ಟು?
- ಗ್ರಾಮೀಣ ಕೋಳಿ ಉದ್ದಿಮೆ ಅಭಿವೃದ್ದಿ (1000 ದೇಶಿ ಮಾತೃಕೋಳಿ ಘಟಕ + ಹ್ಯಾಚರಿ ಘಟಕ+ಮರಿಗಳ ಸಾಕಾಣಿಕೆ ಘಟಕ) Rural Poultry Entrepreneurship Programme- ರೂ.34,72,540/- ಇದಕ್ಕೆ ಸಹಾಯಧನ ಶೇ.50 ರಷ್ಟು ಒಂದು ಘಟಕಕ್ಕೆ ರೂ. 25 ಲಕ್ಷ.
- ಕುರಿ-ಮೇಕೆ ತಳಿ ಸಂವರ್ಧನಾ ಘಟಕ(500+25) Entrepreneur in small ruminant sector (Sheep and goat farming) ಘಟಕ ವೆಚ್ಚ ರೂ. 87,30,000/- ಇದಕ್ಕೆ ಸಹಾಯಧನ ಶೇ.50 ರಷ್ಟು, ಗರಿಷ್ಠ ರೂ.50 ಲಕ್ಷ.
- ಹಂದಿ ತಳಿ ಸಂವರ್ಧನ ಘಟಕ (100+10) Piggery entrepreneurship ಘಟಕ ವೆಚ್ಚ ರೂ. 50,29,400/- ಇದಕ್ಕೆ ಸಹಾಯಧನ ಶೇ.50 ರಷ್ಟು, ಗರಿಷ್ಠ ರೂ.30 ಲಕ್ಷ.
- ರಸಮೇವು ಉತ್ಪಾದನಾ ಘಟಕ (ವಾರ್ಷಿಕ 2000-2500 ಟನ್ ಉತ್ಪಾದನೆ ) Sllage making unit for entrepreneurs
500,000/- ಇದಕ್ಕೆ ಸಹಾಯಧನ ಶೇ.50 ರಷ್ಟು, ಒಂದು ಘಟಕಕ್ಕೆ ಗರಿಷ್ಠ- ರೂ.50 ಲಕ್ಷ.
ಕಡಿಮೆ ಪ್ರಮಾಣದಲ್ಲಿ ಈ ಉದ್ದಿಮೆಯನ್ನು ಪ್ರಾರಂಭಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಶೇ. 50 ರಷ್ಟು ಸಬ್ಸಿಡಿ ನೀಡುವ ಮೂಲಕ ರೈತರಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಕೃಷಿಭೂಮಿಯಲ್ಲಿ ನಿಂತಿರುವ ರೈತರು (ETV Bharat) 2024ರ ಮಾರ್ಚ್ನಲ್ಲೇ ಅರ್ಜಿ ಸಲ್ಲಿಸಿದ್ದೇವೆ. ಆದರೆ..?ಈ ಕುರಿತಂತೆ ಯಲ್ಲಪ್ಲ ಯಲಿವಾಳ ಎಂಬ ರೈತರು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ''ಎನ್ಎಲ್ಎಂ ಸ್ಕೀಂಗೆ ಫಲಾನುಭವಿ ಆಗಲು ನಾವು ಮಾರ್ಚ್ ತಿಂಗಳಲ್ಲಿ ಅರ್ಜಿ ಹಾಕಿದ್ದೆವು. ಡಿಡಿ ಆಫೀಸ್ನಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ಎರಡು ದಿನ ತರಬೇತಿಯನ್ನು ಪಡೆದು ಸರ್ಟಿಫಿಕೆಟ್ ಪಡೆದುಕೊಂಡಿದ್ದೇವೆ. ಬಳಿಕ ಸರ್ಟಿಫಿಕೆಟ್ ಜೊತೆಗೆ ನಮ್ಮ ಬ್ಯಾಂಕ್ ಸ್ಟೆಬಿಲಿಟಿ, ಜಮೀನು ಜಿಪಿಎಸ್ ಫೋಟೋ ಜೊತೆಗೆ ಅಗತ್ಯ ದಾಖಲೆಗಳನ್ನು ಧಾರವಾಡ ಪಶು ವೈದ್ಯಾಧಿಕಾರಿಗೆ ಸಲ್ಲಿಕೆ ಮಾಡಲಾಗಿದೆ'' ಎಂದು ತಿಳಿಸಿದರು.
''ಈಗಾಗಲೇ ರಾಜ್ಯ ಸರ್ಕಾರಕ್ಕೆ ನಮ್ಮ ಅರ್ಜಿಗಳು ಸಲ್ಲಿಕೆಯಾಗಿ ಎಂಟು ತಿಂಗಳು ಕಳೆಯುತ್ತಾ ಬಂದಿದೆ. ಇಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿದರೆ ಪ್ರಿನ್ಸಿಪಲ್ ಸೆಕ್ರೆಟರಿ ಅವರಿಗೆ ಕಳುಹಿಸಿದ್ದಾಗಿ ಹೇಳುತ್ತಾರೆ. ಈಗ ಏನಾಗುತ್ತಿದೆ ಎಂಬುದೇ ನಮ್ಮ ಗಮನಕ್ಕೆ ಬರುತ್ತಿಲ್ಲ. ಈ ಯೋಜನೆ ವಿಚಾರದಲ್ಲಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವೇ ಈ ಯೋಜನೆಯನ್ನೇ ಕೈಬಿಟ್ಟಿದ್ದೇವೆ ಎಂದಾದರೂ ಹೇಳಲಿ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಷ್ಟು ಜನ ಕುರಿ ಸಾಕಣೆಗೆ ಅರ್ಜಿ ಸಲ್ಲಿಕೆ : ಈ ಬಗ್ಗೆ ಗುರು ಭದ್ರಾಪುರ ಎಂಬ ರೈತರು ಪ್ರತಿಕ್ರಿಯೆ ನೀಡಿದ್ದು, ''ನಾವು ಕುರಿ ಸಾಕಾಣಿಕೆಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದೇವೆ. ಇಲ್ಲಿ 100 ರಿಂದ 500 ಕುರಿ ಸಾಕಾಣಿಕೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ನಾನು 100 ಕುರಿ ಸಾಕಾಣಿಕೆಗೆ ಅರ್ಜಿ ಹಾಕಿದ್ದು, 10 ಲಕ್ಷ ಲೋನ್ ಹಾಗೂ 10 ಲಕ್ಷ ಸಬ್ಸಿಡಿ ಇದೆ. 500 ಕುರಿ ಸಾಕಾಣಿಕೆಗೆ 50 ಲಕ್ಷ ಲೋನ್ ಹಾಗೂ 50 ಲಕ್ಷ ಸಬ್ಸಿಡಿ ಇದೆ. ಆದರೆ ವಿಳಂಬದಿಂದಾಗಿ ರೈತರು ಆಸಕ್ತಿ ಕಳೆದುಕೊಳ್ಳುವಂತಾಗಿದೆ.'' ಎಂದರು.
ಇದನ್ನೂ ಓದಿ :ರೈತರಿಗೆ ಬಂಪರ್ ಕೊಡುಗೆ: ಸಹಾಯಧನ ಏರಿಕೆ, ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್ ಅಳವಡಿಕೆಗೆ ಹೆಚ್ಚಿದ ಒಲವು! - Solar powered agricultural - SOLAR POWERED AGRICULTURAL
ವಿಳಂಬದ ಪ್ರಶ್ನೆ ಇಲ್ಲ :ಈ ಬಗ್ಗೆ ಪಶುಪಾಲನಾ ಇಲಾಖೆ ಅಪರ ನಿರ್ದೇಶಕ ಡಾ. ಶ್ರೀನಿವಾಸ ಪುಟ್ಟಯ್ಯ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ಇದೊಂದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, 2026ರ ವರಗೆ ಚಾಲ್ತಿ ಇರಲಿದೆ. ಯಾರು ಬೇಕಾದ್ರೂ ಇದಕ್ಕೆ ಅರ್ಜಿ ಸಲ್ಲಿಸಬಹುದು. ಆದ್ರೆ ಎಲ್ಲಾ ಆನ್ಲೈನ್ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಕೆ ಆಗುವುದರಿಂದ ಪಾರದರ್ಶಕವಾಗಿ ನಡೆಯಲಿದೆ. ಇಲ್ಲಿ ರಾಜ್ಯ ಸರ್ಕಾರ, ಅಧಿಕಾರಿಗಳು ಹಸ್ತಕ್ಷೇಪ ಹಾಗೂ ವಿಳಂಬ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇಡೀ ದೇಶದಲ್ಲಿಯೇ ಎನ್ಎಲ್ಎಂ ಯೋಜನೆಗೆ ಅರ್ಜಿ ಸಲ್ಲಿಕೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಮಧ್ಯಪ್ರದೇಶ ಎರಡನೇ ಸ್ಥಾನದಲ್ಲಿದೆ. ಈವರೆಗೆ ಸುಮಾರು 11,570 ಅರ್ಜಿಗಳು ಬಂದಿವೆ. ಸಾವಿರಾರು ಜನ ಆಯ್ಕೆಯಾಗಿದ್ದಾರೆ. ಇವರಲ್ಲಿ 832 ಜನರಿಗೆ ಸಬ್ಸಿಡಿ ಮಂಜೂರು ಆಗಿದೆ. 337 ಜನರಿಗೆ ಮೊದಲ ಕಂತಿನ ಹಣ ಬಿಡುಗಡೆಯಾದ್ರೆ, 27 ಜನರಿಗೆ ಎರಡನೇ ಹಂತದ ಹಣ ಬಿಡುಗಡೆಯಾಗುವ ಹಂತದಲ್ಲಿದೆ. ಉಳಿದವರ ಅರ್ಜಿ ಪರಿಶೀಲನೆ ಹಂತದಲ್ಲಿದೆ. ಈ ಯೋಜನೆ ಫಲಾನುಭವಿಗಳ ವೈಯಕ್ತಿಕ ವಿವರ, ಬ್ಯಾಂಕ್ ವ್ಯವಹಾರ ಸೇರಿದಂತೆ ಎಲ್ಲಾ ಮೂಲಗಳಿಂದಲೂ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಪರಾಮರ್ಶೆ ಮಾಡಿದ ನಂತರ ಹಂತ ಹಂತವಾಗಿ ಬ್ಯಾಂಕ್ ಸಾಲ ಹಾಗೂ ಸಬ್ಸಿಡಿ ಹಣ ಬಿಡುಗಡೆಯಾಗಲಿದೆ. ಆನ್ಲೈನ್ ಪ್ರಕ್ರಿಯೆ ಇರುವುದರಿಂದ ಆಸಕ್ತರು ಸೂಕ್ತ ದಾಖಲೆಗಳೊಂದಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಪಶುಪಾಲನಾ ಇಲಾಖೆ ಅಪರ ನಿರ್ದೇಶಕರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ₹2,500: ಯೋಜನೆ ಘೋಷಿಸಿದ ಡಿಕೆಶಿ