ಕರ್ನಾಟಕ

karnataka

By ETV Bharat Karnataka Team

Published : Jan 27, 2024, 8:24 PM IST

ETV Bharat / state

ಮಹಿಳಾ ಜಗದ್ಗುರು ಮಾಡಿದ್ದು ಲಿಂಗಾಯತ ಧರ್ಮ‌ಮಾತ್ರ: ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದಲ್ಲಿ ಡಾ. ಗಂಗಾ ಮಾತಾಜಿ ಅಭಿಪ್ರಾಯ

ಜಾಗತಿಕ ಲಿಂಗಾಯತ ಮಹಾಸಭೆಯ ವತಿಯಿಂದ ಬೆಳಗಾವಿಯಲ್ಲಿ ಶನಿವಾರ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶ
ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶ

ಬೆಳಗಾವಿ: ಜಗತ್ತಿನಲ್ಲಿ ಪ್ರಪ್ರಥಮವಾಗಿ ಮಹಿಳೆಯೊಬ್ಬರಿಗೆ ಜಗದ್ಗುರು ಸ್ಥಾನವನ್ನು ನೀಡಿ ಗೌರವಿಸಿದ ಧರ್ಮ ಎಂದರೆ ಅದು ಲಿಂಗಾಯತ ಧರ್ಮ ಮಾತ್ರ ಎಂದು ಕೂಡಲಸಂಗಮ ಶ್ರೀ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಡಾ.ಗಂಗಾ ಮಾತಾಜಿ ಅಭಿಪ್ರಾಯ ಪಟ್ಟರು.

ಭವ್ಯ ಮೆರವಣಿಗೆ

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದ ಸರ್ವಾಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಅವರು, ಮಹಿಳೆಯನ್ನು ಕಸಕ್ಕಿಂತ ಕಡೆಯಾಗಿ ಕಾಣುತ್ತಿದ್ದ ಸಂದರ್ಭದಲ್ಲಿ ಮಹಿಳೆಗೆ ತಮ್ಮ ಸರಿಸಮಾನವಾದ ಸ್ಥಾನಮಾನ ನೀಡಿ ಬೆಳೆಸಿದ್ದು ಬಸವಣ್ಣನವರು. ಸಮಸ್ತ ಶರಣರು ಹಾಕಿಕೊಟ್ಟ ಧರ್ಮ, ತತ್ವ ಸಿದ್ಧಾಂತ ಅರಿತುಕೊಂಡು ಅವರ ಮಾರ್ಗದಲ್ಲಿ ನಡೆಯುವ ಮೂಲಕ ಅವರೆಲ್ಲರನ್ನು ಗೌರವಿಸಬೇಕು. ಐವತ್ತು ವರ್ಷಗಳ ಹಿಂದೆ ಕೂಡಲಸಂಗಮ ಬಸವ ಧರ್ಮ ಪೀಠದ ಜಗದ್ಗುರುವಾಗಿ ಮಾತೆ ಮಹಾದೇವಿ ಅವರನ್ನು ನೇಮಿಸಿದಾಗ ಅದನ್ನು ಸಮಾಜ ಸುಲಭವಾಗಿ ಸ್ವೀಕರಿಸಲಿಲ್ಲ. ಸವಾಲುಗಳ ಮತ್ತು ಕಷ್ಟಗಳನ್ನು ಅವರು ಎದುರಿಸಬೇಕಾಗಿತ್ತು. ಅದಕ್ಕೆಲ್ಲ ಧೈರ್ಯ ತುಂಬಿ ಬೆನ್ನೆಲುಬಾಗಿ ನಿಂತ ಲಿಂಗೈಕ್ಯ ಜಗದ್ಗುರು ಲಿಂಗಾನಂದ ಮಹಾಸ್ವಾಮಿಜಿ ಅವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು ಎಂದು ಸ್ಮರಿಸಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ಮಹಿಳೆಯರು ವೈದಿಕ ಧರ್ಮಾಚರಣೆ ನಿಲ್ಲಿಸಿ ಶರಣ ಧರ್ಮದ ಆಚರಣೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಲಿಂಗಾಯತ ಧರ್ಮದ ನಿಜ ಆಚರಣೆಗಳ ಬಗ್ಗೆ ತಿಳಿದುಕೊಳ್ಳಬೇಕು. ಅಲ್ಲದೇ ತಮ್ಮ ಮನೆಯವರಿಗೂ ತಿಳಿಸಿ ಕೊಡುವ ಕಾರ್ಯ ಮಾಡಬೇಕು. ಲಿಂಗ ನಿಷ್ಠೆ ಬೆಳೆಸಿಕೊಳ್ಳಬೇಕು. ಅದೇ ರೀತಿ ಶರಣ ಶ್ರೇಷ್ಠ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಣೆ ಮಾಡಿದ ಸರ್ಕಾರಕ್ಕೆ ಸಮಸ್ತ ಲಿಂಗಾಯತ ಸಮಾಜದ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ರಾಷ್ಟ್ರೀಯ ಲಿಂಗಾಯತ ಮಹಿಳಾ ಸಮಾವೇಶ

ಧರ್ಮದ 10 ಸಿಎಂಗಳಾದರೂ ಸಮುದಾಯಕ್ಕೆ ಸೇರಿದ ಕೆಲಸ ಮಾಡಲಿಲ್ಲ - ಜಾಮದಾರ್​:ಜಾಗತಿಕ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ್​ ಮಾತನಾಡಿ, ಈವರೆಗೆ ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ 10 ಜನ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಯಾರೊಬ್ಬರೂ ಧರ್ಮಕ್ಕೆ ಬೇಕಾದ ಕೆಲಸ ಮಾಡಲಿಲ್ಲ. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ವಿಜಯಪುರದ ವಿಶ್ವವಿದ್ಯಾಲಯಕ್ಕೆ ಅಕ್ಕ ಮಹಾದೇವಿ ಎಂಬ ಹೆಸರಿಟ್ಟರು. ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲೂ ಬಸವಣ್ಣನವರ ಭಾವಚಿತ್ರ ಹಾಕುವಂತೆ ಆದೇಶ ಹೊರಡಿಸಿದ್ದೂ ಕೂಡ ಅವರೇ. ಈಗ ಅವರೇ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದಾರೆ. ನಮ್ಮವರು ನಮಗೆ ಆಗಿಲ್ಲ. ನಮಗೆ ಅಲ್ಲದವರೇ ನಮಗೆ ಆಗಿದ್ದಾರೆ ಎಂದು ಕಿಡಿಕಾರಿದರು.

ಲಿಂಗಾಯತ ಧರ್ಮ ಹುಟ್ಟಿದ್ದು 900 ವರ್ಷಗಳ ಹಿಂದೆ ಆದರೆ, ಇದೂವರೆಗೆ ನಾವು ನಮ್ಮ ಧರ್ಮದ ಅಸ್ಮಿತೆ, ಅಸ್ತಿತ್ವವೇ ಇಲ್ಲದಂತೆ ಬದುಕಿದ್ದೇವೆ. ಮಂತ್ರ–ದಂಡ ಹಿಡಿದುಕೊಂಡು ಹೋಗುವವರ ಹಿಂದೆ ಹೋಗಬೇಡಿ. ನಮ್ಮ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟವನ್ನು ವಿರೋಧಿಸಿದವರು ಯಾರು ಎಂದು ನಿಮಗೆ ಚೆನ್ನಾಗಿ ಗೊತ್ತಿದೆ. ತಿಳಿದುನೋಡಿ ಚುನಾವಣೆಯಲ್ಲಿ ಮತ ಹಾಕುವಂತೆ ಎಸ್.ಎಮ್.ಜಾಮದಾರ್ ಕಿವಿಮಾತು ಹೇಳಿದರು.

ರಾಷ್ಟ್ರೀಯ ಲಿಂಗಾಯತ ಮಹಿಳಾ ಸಮಾವೇಶ

’ಶರಣ ತತ್ವ ಹೇಳುವವರೇ ಮಂದಿರ ಉದ್ಘಾಟನೆಗೆ ಹೋದರು’:ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಶರಣ ತತ್ವಗಳನ್ನು ಹೇಳುವ, ಮೀಸಲಾತಿಗಾಗಿ ಹೋರಾಡುವ ಕೆಲವು ಸ್ವಾಮೀಜಿಗಳೇ ಜ.22ರಂದು ಮಂದಿರ ಉದ್ಘಾಟನೆಗೆ ಹೋಗಿ ನಿಂತರು. ಅವರಿಗೆ ನಾನು ಧಿಕ್ಕಾರ ಹೇಳುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಸನಾತನ ಧರ್ಮದಲ್ಲಿ ಹುಟ್ಟಿದ್ದು ನನ್ನ ತಪ್ಪಲ್ಲ; ಈ ಧರ್ಮದಲ್ಲಿ ಹೆಣ್ಣಾಗಿ ಹುಟ್ಟಿದ್ದು ನನ್ನ ತಪ್ಪು ಎಂದು ಸೀತಾಮಾತೆಯೇ ಹೇಳಿದ್ದಾಳೆ. ಧರ್ಮದೊಳಗಿನ ಸೂಕ್ಷ್ಮತೆಯನ್ನು ಮಹಿಳೆಯರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಸ್ವತಂತ್ರ ಧರ್ಮವಾದ ಲಿಂಗಾಯತ ಧರ್ಮವನ್ನೇ ಪಾಲಿಸುವಂತೆ ಕರೆ ನೀಡಿದರು.

ರಾಷ್ಟ್ರೀಯ ಲಿಂಗಾಯತ ಮಹಿಳಾ ಸಮಾವೇಶ

ಡಾ. ಜಯಶ್ರೀ ಸಬರದ ವಿರಚಿತ " ಶಿವಶರಣೆಯರ ಸಾಹಿತ್ಯ ಚರಿತ್ರೆ " ಕೃತಿಯನ್ನು ಬೀದರಿನ ಲಿಂಗಾಯಿತ ಮಹಾಮಠದ ಡಾ.ಅಕ್ಕ ಅನ್ನಪೂರ್ಣಾ ತಾಯಿ, ಡಾ.ಬಸವರಾಜ ಸಬರದ ವಿರಚಿತ "ಲಿಂಗಾಯತ ಧರ್ಮ "ಕೃತಿಯನ್ನು ಗೋಕಾಕ ಶೂನ್ಯ ಸಂಪಾದನಾ ಮಠದ ಮುರುಘೇಂದ್ರ ಸ್ವಾಮೀಜಿ, ಪ್ರಭಾ ಪಾಟೀಲ್ ವಿರಚಿತ "ವಚನ ಸನ್ನಿಧಿ" ಕೃತಿಯನ್ನು ಅತ್ತಿವೇರಿ ಬಸವಧಾಮ ಪೀಠದ ಬಸವೇಶ್ವರಿ ತಾಯಿ ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಡಾ. ಟಿಆರ್ ಚಂದ್ರಶೇಖರ್ ಮತ್ತು ಮುಕ್ತಾ ಭಿ. ಕಾಗಲಿ ಅವರ ಸಂಪಾದಕತ್ವದ "ಮಹಿಳಾ ಜಾಗೃತಿ" ಸ್ಮರಣ ಸಂಚಿಕೆಯನ್ನು ಆಡಿ-ಹಂದಿಗುದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು. ಈ ವೇಳೆ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ. ಅಲ್ಲಮಪ್ರಭು ಸ್ವಾಮೀಜಿ, ಶಿಕಾರಿಪುರ ಬಸವಾಶ್ರಮದ ಪೂಜ್ಯ ಶರಣಾಂಬಿಕಾ ತಾಯಿ, ಮಾಜಿ ಸಚಿವರಾದ ಲೀಲಾದೇವಿ ಪ್ರಸಾದ್, ರಾಣಿ ಸತೀಶ್ ಸೇರಿದಂತೆ ಹಲವು ಗಣ್ಯ ಮಾನ್ಯರು ಉಪಸ್ಥಿತರಿದ್ದರು.

ಭವ್ಯ ಮೆರವಣಿಗೆ:ಇಂದು ಬೆಳಗ್ಗೆ ಶ್ರೀನಗರ ಉದ್ಯಾನದಿಂದ, ಶಿವಬಸವ ನಗರ ಮಾರ್ಗವಾಗಿ ಕಾರ್ಯಕ್ರಮ ವೇದಿಕೆವರೆಗೂ ಅಲಂಕೃತ ರಥದಲ್ಲಿ ಸಮಾವೇಶದ ಸರ್ವಾಧ್ಯಕ್ಷೆ ಜಗದ್ಗುರು ಡಾ. ಗಂಗಾ ಮಾತಾಜಿಯವರ ಮತ್ತು ವಚನ ಕಟ್ಟುಗಳ ಭವ್ಯ ಮೆರವಣಿಗೆ ನಡೆಯಿತು. ಇದಕ್ಕೂ ಮುನ್ನ ಸಮಾವೇಶದ ಸರ್ವಾಧ್ಯಕ್ಷರು ಸಮಾವೇಶದ ಧ್ವಜಾರೋಹಣ ನೆರವೇರಿಸಿದರು.

ಇದನ್ನೂ ಓದಿ:ಜ.27, 28ರಂದು ಬೆಳಗಾವಿಯಲ್ಲಿ ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಿಳಾ ಸಮಾವೇಶ: ಜಾಮದಾರ್ ಮಾಹಿತಿ

ABOUT THE AUTHOR

...view details