ಕರ್ನಾಟಕ

karnataka

ETV Bharat / state

ಚುನಾವಣಾ ಬಾಂಡ್​ ಮೂಲಕ ಹಣ ಸಂಗ್ರಹ ಆರೋಪ : ಇಬ್ಬರು ಕೇಂದ್ರ ಸಚಿವರು, ವಿಜಯೇಂದ್ರ, ಕಟೀಲ್​ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್​ - ELECTION BOND ISSUE

ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್​ ಕುಮಾರ್​ ವಿರುದ್ಧದ ಪ್ರಕರಣದ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.

ತೀರ್ಪು ಕಾಯ್ದಿರಿಸಿದ ಹೈಕೋರ್ಟ್​
ತೀರ್ಪು ಕಾಯ್ದಿರಿಸಿದ ಹೈಕೋರ್ಟ್​ (File photo-ETV Bharat)

By ETV Bharat Karnataka Team

Published : Nov 20, 2024, 5:23 PM IST

ಬೆಂಗಳೂರು: ಬಿಜೆಪಿಯ ರಾಷ್ಟ್ರ ಮತ್ತು ರಾಜ್ಯ ಘಟಕಗಳು ಚುನಾವಣಾ ಬಾಂಡ್‌ಗಳ ಮೂಲಕ ಬಹುಕೋಟಿ ದೇಣಿಗೆ ಪಡೆಯಲು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿ ಸುಲಿಗೆ ಮಾಡಿರುವ ಆರೋಪ ಸಂಬಂಧ ಬೆಂಗಳೂರಿನ ತಿಲಕ್‌ ನಗರ ಠಾಣೆಯಲ್ಲಿ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್​ ಕುಮಾರ್​ ಕಟೀಲ್​, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಜೆ ಪಿ ನಡ್ಡಾ ಮತ್ತಿತರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದತಿ ಕೋರಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ಆದೇಶವನ್ನು ಕಾಯ್ದಿರಿಸಿದೆ.

ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಪ್ರಕರಣದ ಆರೋಪಿಯಾದ ಮಾಜಿ ಸಂಸದ ಹಾಗೂ ಬಿಜೆಪಿಯ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ವಾದ-ಪ್ರತಿವಾದ ಆಲಿಸಿದ ಆದೇಶ ಕಾಯ್ದಿರಿಸಿದೆ. ಅಲ್ಲದೆ, ಈ ಹಿಂದೆ ತನಿಖೆಗೆ ತಡೆ ನೀಡಿರುವ ಮಧ್ಯಂತರ ಆದೇಶವು ವಿಸ್ತರಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು, ಐಪಿಸಿ ಸೆಕ್ಷನ್‌ 384ರ ವ್ಯಾಖ್ಯಾನವು ಪ್ರತಿಯೊಂದು ಪ್ರಕರಣದ ವಾಸ್ತವಿಕ ವಿಚಾರದ ಮೇಲೆ ಬದಲಾಗುವುದಿಲ್ಲ. ಸಂತ್ರಸ್ತರು ನ್ಯಾಯಾಲಯದ ಮುಂದೆ ಬಂದಿಲ್ಲ, ಈ ಪ್ರಕರಣದಲ್ಲಿನ ದೂರುದಾರರಿಗೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ, ಇಲ್ಲಿ ಸುಲಿಗೆ ವಿಚಾರ ಅನ್ವಯಿಸುವುದಿಲ್ಲ. ರಂಜನೆಗಾಗಿ ಪ್ರಕರಣವನ್ನು ಪರಿಗಣಿಸಲಾಗದು ಎಂದು ವಾದ ಮಂಡಿಸಿದರು.

ಇದಕ್ಕೆ ಆಕ್ಷೇಪಿಸಿದ ದೂರುದಾರರ ಪರ ವಕೀಲರು, ದೂರಿನಲ್ಲಿನ ಆರೋಪವು ಸುಲಿಗೆಗೆ ಉತ್ತಮ ಉದಾಹರಣೆಯಾಗಿದೆ. ಸುಲಿಗೆಗೆ ಗುರಿಯಾಗಿರುವ ವ್ಯಕ್ತಿಯೂ ಅಪರಾಧದಿಂದ ಲಾಭ ಪಡೆದಿದ್ದಾರೆ. ಬಿಜೆಪಿಗೆ ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿದ ಬಳಿಕ ಅವರ ವಿರುದ್ಧ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ತನಿಖೆ ನಿಲ್ಲಿಸಲಾಗಿದೆ. ಈ ಕಾರಣಕ್ಕಾಗಿ ಅವರು ದೂರು ನೀಡಿಲ್ಲ. ಸಾಮಾನ್ಯ ಜನರೇ ಈ ಸಂಬಂಧ ದೂರು ನೀಡುವುದು ಎಂದು ಪೀಠಕ್ಕೆ ತಿಳಿಸಿದರು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷರಾಗಿರುವ ಆದರ್ಶ್‌ ಆರ್‌. ಐಯ್ಯರ್‌ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಜೆ ಪಿ ನಡ್ಡಾ, ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯ ಘಟಕದ ಹಾಲಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಐಪಿಸಿ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲು ತಿಲಕ್‌ ನಗರ ಪೊಲೀಸರಿಗೆ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶದಂತೆ ಎಫ್‌ಐಆರ್‌ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ನಳಿನ್​ ಕುಮಾರ್ ಕಟೀಲ್​ ಅರ್ಜಿ ಸಲ್ಲಿಸಿದ್ದರು.

ಈ ಸುದ್ದಿಯನ್ನೂ ಓದಿ: ಚುನಾವಣಾ ಬಾಂಡ್ ಮೂಲಕ ಸುಲಿಗೆ ಆರೋಪ: ನಿರ್ಮಲಾ ಸೀತಾರಾಮನ್, ಕಟೀಲ್, ವಿಜಯೇಂದ್ರ ಸೇರಿ ಹಲವರ ವಿರುದ್ಧ ಎಫ್ಐಆರ್ - FIR Against Nirmala Sitharaman

ABOUT THE AUTHOR

...view details