ನಾಗಬನಗಳಲ್ಲಿ ವಿಶೇಷ ಪೂಜೆ (ETV Bharat) ಮಂಗಳೂರು:ನಾಡಿನೆಲ್ಲೆಡೆ ಇಂದು ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನಾಗರಾಧನೆ ಶೃದ್ಧಾ ಭಕ್ತಿಯಿಂದ ನಡೆಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ, ಕುಡುಪು ಕ್ಷೇತ್ರ ಹಾಗೂ ಕುಟುಂಬದ ಮೂಲ ನಾಗಬನಗಳಿಗೆ ತೆರಳಿ ಭಕ್ತರು ತನು ಅರ್ಪಿಸಿದರು.
ನಾಗರಾಧನೆ ಕ್ಷೇತ್ರಗಳಲ್ಲಿ ಮುಂಜಾನೆಯಿಂದಲೇ ಜನರು ತೆರಳಿ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆಯುತ್ತಿದ್ದಾರೆ. ಸಾವಿರಾರು ಭಕ್ತರು ನಾಗ ದೇವರಿಗೆ ಹಾಲಿನ ಅಭಿಷೇಕ, ಸೀಯಾಳ ಅಭಿಷೇಕ ಕೈಗೊಂಡರು.
ಕರಾವಳಿಯಲ್ಲಿ ನಾಗರ ಪಂಚಮಿಯಂದು ಎಲ್ಲರೂ ತಮ್ಮ ಪೂರ್ವಜರಿಂದ ಬಂದ ಕುಟುಂಬದ ಮೂಲ ನಾಗಬನಗಳಿಗೆ ತೆರಳಿ ತನು ಅರ್ಪಿಸುವ ಪದ್ಧತಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪವಿತ್ರ ದಿನದಂದು ಹಾಲು, ಸೀಯಾಳಗಳನ್ನು ನಾಗದೇವರಿಗೆ ಸಮರ್ಪಿಸುತ್ತಾರೆ. ಪ್ರತಿ ನಾಗಬನದಲ್ಲಿಯೂ ದೇವರಿಗೆ ತನು ಅರ್ಪಿಸಲು ಬರುವ ಭಕ್ತರು ತಂಬಿಲ ಸೇವೆಗಳನ್ನು ನಡೆಸುತ್ತಾರೆ.
ಇದನ್ನೂ ಓದಿ:ನಾಗರ ಪಂಚಮಿ: ಕಲ್ಲಿನ ನಾಗಪ್ಪನಿಗೆ ಹಾಲೆರೆದು ಪೂಜಿಸಿದ ಮಹಿಳೆಯರು - Nagara Panchami Celebration
ತನು ಅರ್ಪಣೆ ವಿಶೇಷವೇನು?:ನಾಗರಪಂಚಮಿ ದಿನದಂದು ನಾಗರಮೂರ್ತಿಗಳನ್ನು ಶುದ್ಧ ನೀರಿನಿಂದ ತೊಳೆದು, ಹಾಲು ಸೀಯಾಳದ ಅಭಿಷೇಕ ಮಾಡಲಾಗುತ್ತದೆ. ಅರಶಿಣ ಹಚ್ಚಿ, ನಾಗನಿಗೆ ಪ್ರಿಯವಾದ ಕೇದಗೆ, ಸಂಪಿಗೆ, ಅಡಕೆ ಸಿಂಗಾರದಿಂದ ಅಲಂಕರಿಸಲಾಗುತ್ತದೆ. ಬಳಿಕ ಅರಳು, ಬೆಲ್ಲ, ಬಾಳೆಹಣ್ಣಿನ ನಾಗತಂಬಿಲ ಅರ್ಪಿಸಲಾಗುತ್ತದೆ. ತನು ಅರ್ಪಿಸುವುದೆಂದರೆ ತಂಪು ಮಾಡುವುದೆಂದು ಅರ್ಥ. ಇಲ್ಲಿ ನಾಗರಕಲ್ಲಿಗೆ ಅರ್ಪಿಸಿದ ಹಾಲು, ಸೀಯಾಳ ಭೂಮಿಯ ಒಡಲು ಸೇರಿ ತಂಪು ಮಾಡುತ್ತದೆ. ಜೊತೆಗೆ ಮಳೆ ನೀರಿನೊಂದಿಗೆ ಹಾಲು - ಸೀಯಾಳ ಕಡಲು ಸೇರುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ನಾಗರಪಂಚಮಿಯ ಬಳಿಕ ಮೀನುಗಾರಿಕೆ ಮೆಲ್ಲನೆ ಆರಂಭವಾಗುತ್ತದೆ. ಮಳೆಗಾಲದಲ್ಲಿ ತಾತ್ಕಾಲಿಕ ಸ್ಥಗಿತವಾಗಿರುವ ಮೀನುಗಾರಿಕೆ ಮರು ಆರಂಭಕ್ಕೆ ನಾಗರಪಂಚಮಿ ಗಡುವು ಆಗಿದೆ.
ದೇವರಿಗೆ ಹಾಲೆರೆಯುತ್ತಿರುವುದು (ETV Bharat) ಸೀಯಾಳ, ಹೂ ಬಲು ದುಬಾರಿ:ನಾಗರಪಂಚಮಿ ದಿನ ನಾಗಬನದಲ್ಲಿ ಪೂಜೆ ಸಲ್ಲಿಸುವವರು ಸೀಯಾಳ, ಹೂವು, ಹಾಲು ಮೊದಲಾದವುಗಳನ್ನು ಕೊಂಡೊಯ್ಯುತ್ತಾರೆ. ಈ ಹಿನ್ನೆಲೆಯಲ್ಲಿ ಸೀಯಾಳ, ಹೂವುಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರತಿ ಸೀಯಾಳಕ್ಕೆ 50 ರೂ., ಕೆಂದಾಳಿ ಸೀಯಾಳಕ್ಕೆ 60 ರೂ. ದರವಿದ್ದರೆ, ಹೂವಿನ ದರವು ಏರಿಕೆಯಾಗಿದೆ. ಹಳದಿ ಸೇವಂತಿಗೆ ಒಂದು ಗುಚ್ಚಿಗೆ 2,000 ರೂ.ಗಳಿದೆ. ಕಳೆದ ವರ್ಷ 1,300 ರೂ. ಇತ್ತು. ಕಾಕಡ ಗುಚ್ಚಿಗೆ 600 ರೂ., ಜಾಜಿಗೆ 1200 ರೂ., ಕೇದಗೆಗೆ 100 ರೂ. ಹಾಗೂ ಹಳದಿ ಎಲೆ ಕಟ್ಟಿಗೆ 50ರಿಂದ 60 ರೂ. ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಬೆಲೆ ಏರಿಕೆ ಬಿಸಿಯ ನಡುವೆಯೂ ಕೂಡ ಭಕ್ತರು ದೇವರಿಗೆ ವಿವಿಧ ಹೂ, ಸೀಯಾಳ, ಹಾಲು ಅರ್ಪಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ:ಬೆಳಗಾವಿಯಲ್ಲಿ ಕಳೆಗಟ್ಟಿದ ನಾಗರ ಪಂಚಮಿ ಹಬ್ಬ: ಪಂಚಮಿ ಉಂಡೆ, ಹೂವು-ಹಣ್ಣು ಖರೀದಿ ಜೋರು - nagara panchami