ಮೈಸೂರು: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿ ಬದಲಾಗಿದೆ. ಸಿಎಂ ಸ್ಥಾನದಲ್ಲಿರುವುದರಿಂದ ಕ್ಷೇತ್ರ ಗೆಲ್ಲಿಸುವ ಜವಾಬ್ದಾರಿ ಸಿದ್ದರಾಮಯ್ಯ ಮೇಲಿದೆ. ಕ್ಷೇತ್ರದಲ್ಲಿ ಹ್ಯಾಟ್ರಿಕ್ ವಿಜಯ ಪತಾಕೆ ಹಾರಿಸಲು ರಾಜವಂಶಸ್ಥರಿಗೆ ಬಿಜೆಪಿ ಮಣೆ ಹಾಕಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಎಂ ಲಕ್ಷ್ಮಣ್ ಹಾಗೂ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದ್ದು, ಸೋಲು-ಗೆಲುವಿನ ವಿಶ್ಲೇಷಣೆ ನಡೆಯುತ್ತಿದೆ. ಎರಡು ಪಕ್ಷಗಳು ಗೆಲುವಿನ ವಿಶ್ವಾಸದಲ್ಲಿವೆ. ಹಾಗಾದರೆ ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಹೇಗಿದೆ ಅನ್ನೋದನ್ನು ನೋಡೋಣ..
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳು ಬರಲಿವೆ. ಕ್ಷೇತ್ರ ಪುನರ್ ವಿಂಗಡನೆಗೂ ಮುನ್ನ ಇದು ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. ಕ್ಷೇತ್ರ ಪುನರ್ ವಿಂಗಡಣೆಯಾದ ನಂತರ ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಬಿಜೆಪಿಯ ಭದ್ರಕೋಟೆಯಾಗಿ ಬದಲಾಗಿದೆ. 2014 ರಿಂದ ಪ್ರತಾಪ್ ಸಿಂಹ ಎರಡು ಬಾರಿ ಬಿಜೆಪಿ ಸಂಸದರಾಗಿದ್ದರು. ಆದರೆ ಈ ಬಾರಿ ಬಿಜೆಪಿ ರಾಜವಂಶಸ್ಥರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ನಿಂದ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯದುವೀರ್ ಒಡೆಯರ್ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದಾರೆ.
ರಾಜವಂಶಸ್ಥರ ಕೈ ಹಿಡಿತಾರಾ ಮತದಾರ?:ಮೊದಲ ಬಾರಿಗೆ ರಾಜವಂಶಸ್ಥ ಯದುವೀರ್ ಒಡೆಯರ್ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಮೈಸೂರಿಗೆ ರಾಜವಂಶಸ್ಥರು ನೀಡಿರುವ ಕೊಡುಗೆಗಳು ಮತ್ತು ಅವರ ವರ್ಚಸ್ಸು ಇಲ್ಲಿ ಪರಿಣಾಮ ಬೀರಲಿವೆ ಎಂದು ಹೇಳಲಾಗುತ್ತಿದೆ. ಸಾಂಪ್ರದಾಯಿಕ ಬಿಜೆಪಿ ಹಾಗೂ ಜೆಡಿಎಸ್ ಮತಗಳ ಬೆಂಬಲದೊಂದಿಗೆ ಪ್ರಚಾರದ ಸಮಯದಲ್ಲಿ ಯುವ ಜನರನ್ನ ಸೆಳೆಯುವಲ್ಲಿ ಮಹಾರಾಜರು ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಗೆಲುವಿನ ನಂತರ ಮೈಸೂರನ್ನು ಪ್ರವಾಸಿ ತಾಣವಾಗಿ ಮಾಡುವ ಚಿಂತನೆ ಸೇರಿದಂತೆ ಹಲವು ಭರವಸೆ ನೀಡಿದ್ದರು. ಜೊತೆಗೆ ಚುನಾವಣಾ ಪ್ರಚಾರದಲ್ಲಿ ಯುವ ಜನರೊಂದಿಗೆ ನಡೆಸಿದ ಸಂವಾದ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಕೆಲಸ ಮಾಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗೆಯೇ ಮೋದಿ ಅಲೆ ಜೊತೆಗೆ ಜೆಡಿಎಸ್ ಬಲದಿಂದ ಬಿಜೆಪಿ ಹ್ಯಾಟ್ರಿಕ್ ಸಾಧಿಸಲಿದೆ ಎನ್ನುವುದು ಕಮಲ ಪಾಳೆಯದಲ್ಲಿನ ಲೆಕ್ಕಾಚಾರ.