ಬೆಳಗಾವಿ: 2024ನೇ ಸಾಲಿನ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿದೆ. ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಗುರುವಾರ ವಿಧಾನಸಭೆಯಲ್ಲಿಈ ವಿಧೇಯಕವನ್ನು ಪರ್ಯಾಲೋಚನೆ ಹಾಗೂ ಅಂಗೀಕಾರಕ್ಕಾಗಿ ಸದನದ ಮುಂದೆ ಮಂಡಿಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಗಾಗಿ ವಿಧೇಯಕವನ್ನು ರಚನೆ ಮಾಡಲಾಗಿದೆ. ಪ್ರಾಧಿಕಾರಕ್ಕೆ ಹಿರಿಯ ಶ್ರೇಣಿ ಐಎಎಸ್ ಅಧಿಕಾರಿಯನ್ನು ಆಯಕ್ತರನ್ನಾಗಿ ನೇಮಿಸಲು ಅವಕಾಶ ನೀಡಲಾಗಿದೆ. ಪ್ರಾಧಿಕಾರ ಸದಸ್ಯತ್ವದ ನೇಮಕಕ್ಕೂ ತಿದ್ದುಪಡಿ ತಂದು ಸರ್ಕಾರಕ್ಕೆ ಸದಸ್ಯರ ನೇಮಕ ಮಾಡಲು ಅಧಿಕಾರ ನೀಡಲಾಗಿದೆ. ಮೈಸರೂ ಪಾರಂಪರಿಕ ಮಹತ್ವ ಕಾಪಾಡಲು ಪ್ರಾಧಿಕಾರದ ಅಡಿ ಪಾರಂಪರಿಕ ಕಟ್ಟಡಗಳ ರಕ್ಷಣಾ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಶ್ರೀವತ್ಸ ವಿರೋಧ:ಇದಕ್ಕೂ ಮುನ್ನ ಮಾತನಾಡಿದ ಶಾಸಕ ಶ್ರೀವತ್ಸ, ಮುಡಾ ರಾಜ್ಯ, ದೇಶದಲ್ಲಿ ಸುದ್ದಿಯಾಗಿದೆ. ಈ ವಿಧೇಯಕದಲ್ಲಿ ಯಾವ ಸುಧಾರಣೆ ಇದೆ ಅಂತ ಗೊತ್ತಾಗುತ್ತಿಲ್ಲ. ಸುಧಾರಣೆ ಆಗಿರೋದು ಸದಸ್ಯರ ಸಂಖ್ಯೆ ಕಡಿಮೆ ಮಾಡಿರೋದು. ಎಲ್ಲ ಹಗರಣಗಳಿಗೆ ಶಾಸಕರೇ ಕಾರಣ ಅಂತ ಹೊರಗೆ ಸಂದೇಶ ಹೋಗುತ್ತಿದೆ. ಒಬ್ಬರು ಶಾಸಕರನ್ನು ಮಾತ್ರ ನೀವು ಸದಸ್ಯರಾಗಿ ಮಾಡಲು ಹೋಗುತ್ತಿದ್ದೀರಿ. ಆದರೆ ಉಳಿದ ಅಷ್ಟೂ ಶಾಸಕರು ಮುಡಾ ಹಗರಣದಲ್ಲಿ ಭಾಗಿದಾರರು, ಅದಕ್ಕೆ ಸರ್ಕಾರ ಶಾಸಕರನ್ನು ತೆಗೆಯುತ್ತಿದೆ ಅಂತ ಸಂದೇಶ ಹೋಗುತ್ತಿದೆ. ಶಾಸಕರು ಮುಡಾಗೆ ಸದಸ್ಯರು ಆಗುವ ಅಗತ್ಯವಿಲ್ಲ ಅಂತ ನಾನು ಆವತ್ತೇ ಸಚಿವ ಹೆಚ್.ಸಿ.ಮಹದೇವಪ್ಪ ಅವರಿಗೆ ಹೇಳಿದ್ದೆ. ಆದರೆ ಈಗ ಸಮಯ, ಸಂದರ್ಭ ಹೇಗಿದೆ?. ಶಾಸಕರೇ ಮುಡಾ ಹಗರಣ ಮಾಡಿದ್ದಾರೆಂದು ಅವರನ್ನು ತೆಗೆದಿದ್ದಾರೆ ಅಂತ ಜನರಿಗೆ ತಪ್ಪು ಸಂದೇಶ ಕೊಡಲು ಸರ್ಕಾರ ಮುಂದಾಗಿದೆ'' ಎಂದು ಆರೋಪಿಸಿದರು.
''ಜನಸ್ನೇಹಿ ಮಾಡಲು ಈ ವಿಧೇಯಕದಲ್ಲಿ ಏನೂ ಇಲ್ಲ. ಕನಿಷ್ಠ ಇಷ್ಟು ಎಕರೆ ಇದ್ದರೆ ಮಾತ್ರ ಲೇಔಟ್ಗೆ ಅನುಮತಿ ಕೊಡಬೇಕು ಅನ್ನುವ ನಿಯಮ ಇರಲಿ. ಆಯುಕ್ತರು ಪ್ರಾಧಿಕಾರದ ತೀರ್ಮಾನಗಳನ್ನು ಪರಿಣಾಮವಾಗಿ ಕಾರ್ಯಗತಗೊಳಿಸಬೇಕು ಅಂತ ವಿಧೇಯಕದಲ್ಲಿ ಇದೆ. ಆದರೆ, ಇವತ್ತಿನವರೆಗೂ ಈ ಕಾಲಂ ಪ್ರಕಾರ ಯಾವ ಆಯುಕ್ತರೂ ಕೆಲಸ ಮಾಡಿಲ್ಲ. ಆಯುಕ್ತರ ಮೇಲೆ ಏನು ಶಿಸ್ತು ಕ್ರಮ ಆಗಿದೆ?'' ಎಂದು ಪ್ರಶ್ನಿಸಿದರು.
''ಸರ್ಕಾರದ ಆದೇಶವನ್ನು ಆಯುಕ್ತರು ಪಾಲಿಸಿಲ್ಲ ಅಂತ ಹಗರಣ ಆಗಿದೆ. ಇದೇ ಕಾರಣಕ್ಕೆ ಮುಡಾ ಹಗರಣ ಸುದ್ದಿಯಾಗಿರುವುದು. ಸರ್ಕಾರದ ಆದೇಶ ಪಾಲಿಸದ ಅಧಿಕಾರಿಗೆ ಶಿಕ್ಷೆ ಕೊಟ್ಟಿದ್ದರೆ ಈ ನಿಯಮಕ್ಕೆ ಅರ್ಥ ಬರುತ್ತಿತ್ತು. ಆದರೆ, ಆ ಅಧಿಕಾರಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ, ಮಾಧ್ಯಮ ಹೇಳಿಕೆ ಕೊಡುತ್ತಿದ್ದಾರೆ. ಈಗಿನವರೆಗೂ ಆ ಅಧಿಕಾರಿಗೆ ಶಿಕ್ಷೆ ಆಗಿಲ್ಲ. ಹಾಗಾಗಿ, ಇದರಲ್ಲಿ ತೋರಿಸಿರುವ ಈ ನಿಯಮ ಹಾಸ್ಯಾಸ್ಪದವಾಗಿದೆ'' ಎಂದರು.