ಕರ್ನಾಟಕ

karnataka

ETV Bharat / state

ಮೈಸೂರು ದಸರಾ ಸಿದ್ಧತೆ: 1,000 ಕೆಜಿ ಭಾರ ಹೊರಿಸಿ ಅಭಿಮನ್ಯು ಆನೆಗೆ ತಾಲೀಮು - Mysuru Dasara 2024 - MYSURU DASARA 2024

ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಮರದ ಅಂಬಾರಿ, ಗಾದಿ ಹಾಗೂ ಮರಳಿನ ಮೂಟೆ ಸೇರಿದಂತೆ 1,000 ಕೆ.ಜಿ ಭಾರವನ್ನು ಅಭಿಮನ್ಯು ಆನೆಯ ಮೇಲೆ ಹೊರಿಸಿ ತಾಲೀಮು ನಡೆಸಲಾಯಿತು.

Abhimanyu carrying wooden Ambari
ಮರದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು ಆನೆ (ETV Bharat)

By ETV Bharat Karnataka Team

Published : Sep 19, 2024, 12:48 PM IST

Updated : Sep 19, 2024, 2:08 PM IST

ಮೈಸೂರು:ಜಂಬೂ ಸವಾರಿಯ ದಿನ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಅಭಿಮನ್ಯು ಆನೆಗೆ ಮರದ ಅಂಬಾರಿಯನ್ನು ಹೊರಿಸಿ ಬುಧವಾರ ಸಂಜೆ ತಾಲೀಮು ನಡೆಸಲಾಯಿತು. ಇದಕ್ಕೂ ಮುನ್ನ ಸಾಂಪ್ರದಾಯಿಕ ಪೂಜೆ ನೇರವೇರಿತು. ಅಭಿಮನ್ಯುವಿಗೆ ಲಕ್ಷ್ಮೀ ಹಾಗೂ ಹಿರಣ್ಯ ಕುಮ್ಕಿ ಆನೆಗಳಾಗಿ ಸಾಥ್‌ ನೀಡಿದವು.

ಮರದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು ಆನೆ (ETV Bharat)

ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಅಭಿಮನ್ಯು ನೇತೃತ್ವದ ಗಜಪಡೆ ಅರಮನೆಯಲ್ಲಿ ಬೀಡು ಬಿಟ್ಟಿವೆ. ಪ್ರತಿನಿತ್ಯ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ತಾಲೀಮಿನೊಂದಿಗೆ ಗಜಪಡೆಗೆ ವಿಶೇಷ ಆಹಾರ ನೀಡಲಾಗುತ್ತಿದೆ.

ಬುಧವಾರ ಸಂಜೆ ಚಿನ್ನದ ಅಂಬಾರಿ ಕಟ್ಟುವ ಸ್ಥಳದಲ್ಲಿ ಮರದ ಅಂಬಾರಿ, ಗಾದಿ ಹಾಗೂ ಮರಳಿನ ಮೂಟೆ ಸೇರಿದಂತೆ 1,000 ಕೆ.ಜಿ ಭಾರವನ್ನು ಅಭಿಮನ್ಯುವಿನ ಹೆಗಲ ಮೇಲಿರಿಸಿ ಕಸರತ್ತು ನಡೆಸಲಾಯಿತು.

ಮರದ ಅಂಬಾರಿ ಕಟ್ಟುವ ಮುನ್ನ ಮರದ ಅಂಬಾರಿಯಲ್ಲಿ ಗಣೇಶ ಮೂರ್ತಿಯನ್ನಿಟ್ಟು, ಗಣಪತಿ ಪೂಜೆ ನೇರವೇರಿಸಲಾಯಿತು. ಬಳಿಕ ಅಂಬಾರಿಯನ್ನು ಕ್ರೇನ್‌ ಮೂಲಕ ಕಟ್ಟಲಾಯಿತು. ಅಭಿಮನ್ಯು ಆನೆಯ ಬಲಭಾಗಕ್ಕೆ ಲಕ್ಷ್ಮೀ ಎಡಭಾಗಕ್ಕೆ ಇದೇ ಮೊದಲ ಬಾರಿಗೆ ಹಿರಣ್ಯ ಹೆಣ್ಣಾನೆಯನ್ನು ಕುಮ್ಕಿ ಆನೆಯಾಗಿ ನಿಲ್ಲಿಸಲಾಯಿತು.

ಬಳಿಕ ಅರಮನೆಗೆ ಒಂದು ಸುತ್ತು ಹಾಕಿದ ಆನೆಗಳು ಉತ್ತರ ದ್ವಾರದ ಮೂಲಕ ಮರದ ಅಂಬಾರಿ ಹೊತ್ತು ಬನ್ನಿಮಂಟಪದವರೆಗೆ ಹೆಜ್ಜೆ ಹಾಕಿದವು. ಒಂದು ಗಂಟೆ ಮೂವತ್ತು ನಿಮಿಷಗಳ ಅವಧಿಗೆ ಸುಮಾರು 12 ಕಿಲೋ ಮೀಟರ್‌ ದೂರವನ್ನು ಅಭಿಮನ್ಯು ಕ್ರಮಿಸಿತು.

ಈ ಕುರಿತು ಡಿಸಿಎಫ್‌ ಡಾ.ಐ.ಬಿ.ಪ್ರಭುಗೌಡ ಮಾತನಾಡಿ, "ದಸರಾದಲ್ಲಿ ಭಾಗವಹಿಸುವ ಗಜಪಡೆಗೆ ವಿವಿಧ ತಾಲೀಮು ನಡೆಸಲಾಗುತ್ತಿದೆ. ಚಿನ್ನದಂಬಾರಿ ಹೊರುವ ಅಭಿಮನ್ಯು ಆನೆಗೆ ಮರದ ಅಂಬಾರಿ ಇರಿಸಿ ಪ್ರತೀ ವರ್ಷದಂತೆ ತಾಲೀಮು ನಡೆಸಲಾಯಿತು. ಸಾಕಷ್ಟು ಅನುಭವವಿರುವ ಅಭಿಮನ್ಯು ಇತರ ಗಜಪಡೆಗಳೊಂದಿಗೆ ಮರದ ಅಂಬಾರಿ ಹೊತ್ತು ಸಾಗಿತು. ಮುಂದಿನ ದಿನಗಳಲ್ಲಿ ಮಹೇಂದ್ರ, ಧನಂಜಯ, ಸುಗ್ರೀವಾ, ಗೋಪಿ ಹಾಗೂ ಭೀಮ ಆನೆಗಳಿಗೂ ಮರದ ಅಂಬಾರಿ ತಾಲೀಮು ನಡೆಸಲಾಗುವುದು. ಸಿಡ್ಡಿಮದ್ದು ತಾಲೀಮಿನ ಬಗ್ಗೆ ಪೊಲೀಸ್‌ ಇಲಾಖೆ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಮೈಸೂರು ದಸರಾ: ಕುಶಾಲತೋಪು ಸಿಡಿಸುವ ಫಿರಂಗಿಗಳ ಡ್ರೈ ರನ್‌ ಆರಂಭ - Cannons Dry Run

Last Updated : Sep 19, 2024, 2:08 PM IST

ABOUT THE AUTHOR

...view details