ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾದ ಆನೆಗಳನ್ನು ಸಾಂಪ್ರದಾಯಿಕವಾಗಿ ಕಾಡಿನಿಂದ ನಾಡಿಗೆ ಬೀಳ್ಕೊಡಲು ಆಗಸ್ಟ್ 21ರಂದು ವೀರನಹೊಸಳ್ಳಿಯಲ್ಲಿ ವಿಧ್ಯುಕ್ತವಾಗಿ ಗಜಪಯಣ ಆಯೋಜಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಇಂದು ಮೈಸೂರು ಮೃಗಾಲಯದಲ್ಲಿ ಸಂದರ್ಶಕರ ಅನುಕೂಲಕ್ಕಾಗಿ ಲಗೇಜು ಕೊಠಡಿ ಮತ್ತು ಹುಲಿ ಮನೆಯ ವೀಕ್ಷಣಾ ಗ್ಯಾಲರಿ ಉದ್ಘಾಟಿಸಿ ಸಚಿವ ಈಶ್ವರ ಬಿ.ಖಂಡ್ರೆ ಮಾತನಾಡಿದರು.
ಮೃಗಾಲಯಕ್ಕೆ ದೂರದ ಊರುಗಳಿಂದ ಆಗಮಿಸುವ ಪ್ರವಾಸಿಗರಿಗೆ 80 ಎಕರೆಯಷ್ಟು ವಿಶಾಲವಾದ ಮೃಗಾಲಯ ಆವರಣದಲ್ಲಿ ವನ್ಯಮೃಗ, ಪಕ್ಷಿಗಳನ್ನು ವೀಕ್ಷಿಸಲು ವರ್ಧಿತ ಸೇವೆಗಳನ್ನು ನೀಡಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ತಿಳಿಸಿದರು.
ಮೈಸೂರು ಮೃಗಾಲಯ ವಿಶ್ವದಲ್ಲಿಯೇ ಅತ್ಯಂತ ಜನಪ್ರಿಯ ಮೃಗಾಲಯಗಳಲ್ಲಿ ಒಂದೆಂಬುದು ಕರುನಾಡಿಗೆ ಹೆಮ್ಮೆಯ ಸಂಗತಿ. ಪ್ರತಿ 4 ವರ್ಷಕ್ಕೊಮ್ಮೆ ಕೇಂದ್ರೀಯ ಮೃಗಾಲಯ ಪ್ರಾಧಿಕಾರ ನಡೆಸುವ ಸಾಮರ್ಥ್ಯ ನಿರ್ವಹಣಾ ಮೌಲ್ಯೀಕರಣದ ಪ್ರಕಾರ ಭಾರತದ ಮೃಗಾಲಯಗಳ ಶ್ರೇಣೀಕರಣದಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯ 2ನೇ ಸ್ಥಾನದಲ್ಲಿದೆ. ಚೆನ್ನೈ ಅರಿಜ್ಞರ್ ಅಣ್ಣ ಮೃಗಾಲಯ ಮೊದಲ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.
ಲಗೇಜ್ ಕೊಠಡಿ ಉದ್ಘಾಟನೆ (ETV Bharat) ಲಗೇಜು ಕೊಠಡಿ:ದೂರದ ಊರಿನಿಂದ ಪ್ರವಾಸಿಗರು ಮತ್ತು ಸಂದರ್ಶಕರು ತಮ್ಮ ಲಗೇಜು ಹೊತ್ತು ಮೃಗಾಲಯಕ್ಕೆ ಬಂದು ಇಲ್ಲಿ ಮತ್ತೆ ಕ್ಯೂನಲ್ಲಿ ನಿಂತು ಲಗೇಜು ಇಡುವುದು ಕಷ್ಟವಾಗುತ್ತಿತ್ತು. ಜೊತೆಗೆ ಲಗೇಜುಗಳಲ್ಲಿ ಸ್ಫೋಟಕ ಇತ್ಯಾದಿಯನ್ನು ತಪಾಸಣೆ ಮಾಡುವುದೂ ಸಿಬ್ಬಂದಿಗೆ ಕಷ್ಟವಾಗುತ್ತಿತ್ತು. ಹೀಗಾಗಿ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಲಗೇಜು ಕೊಠಡಿ ಮಾಡಲಾಗಿದ್ದು, ಇಲ್ಲಿ ಸ್ಕ್ಯಾನರ್ ಅಳವಡಿಸಿ ತಪಾಸಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹುಲಿ ವೀಕ್ಷಣಾ ಗ್ಯಾಲರಿ:ಮೃಗಾಲಯದಲ್ಲಿರುವ ಹುಲಿಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಇಲ್ಲಿ ಹುಲಿ ವೀಕ್ಷಣಾ ಗ್ಯಾಲರಿ ನಿರ್ಮಿಸಲಾಗಿದೆ. ಇಲ್ಲಿ ಎತ್ತರದ ದಿಬ್ಬ ನಿರ್ಮಿಸಲಾಗಿದ್ದು, ಗಾಜಿನೊಳಗಿಂದ ಸಂದರ್ಶಕರು ವೀಕ್ಷಿಸಬಹುದು. ಹತ್ತಿರದಿಂದ ಇಲ್ಲಿ ಹುಲಿ ವೀಕ್ಷಿಸಲು ಅನುಕೂಲವಾಗುವಂತೆ ಮುಂಚಾಚು ನಿರ್ಮಿಸಲಾಗಿದೆ ಎಂದೂ ವಿವರಿಸಿದರು.
ಹುಲಿ ಮನೆ ವೀಕ್ಷಣಾ ಗ್ಯಾಲರಿ (ETV Bharat) ಕಾರಂಜಿ ಕೆರೆ ಮತ್ಸ್ಯಾಲಯಕ್ಕೆ ಮರು ಟೆಂಡರ್:ಕಾರಂಜಿ ಕೆರೆ ಆವರಣದಲ್ಲಿ ಆರಂಭಿಸಲು ಉದ್ದೇಶಿಸಿರುವ ಸಮುದ್ರ ಮತ್ತು ಸಿಹಿನೀರು ಮೀನುಗಳ ಮತ್ಸ್ಯಾಗಾರ ನಿರ್ಮಿಸಲು ಯೋಜಿಸಲಾಗಿದ್ದು, ಇದಕ್ಕೆ ಕಳೆದ ಜನವರಿಯಲ್ಲಿ ಟೆಂಡರ್ ಕರೆಯಲಾಗಿತ್ತು. ಆದರೆ ಒಬ್ಬ ಗುತ್ತಿಗೆದಾರರು ಮಾತ್ರವೇ ಟೆಂಡರ್ ಸಲ್ಲಿಸಿದ್ದ ಕಾರಣ ಈ ಟೆಂಡರ್ ರದ್ದು ಮಾಡಿ, ಹೊಸದಾಗಿ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ವಿಳಂಬವಾಗಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.
ಕೂರ್ಗಳ್ಳಿಯಲ್ಲಿ ವನ್ಯಮೃಗ ರಕ್ಷಣಾ ಕೇಂದ್ರ:ಮೈಸೂರು ಹೊರವಲಯ ಕೂರ್ಗಳ್ಳಿಯಲ್ಲಿ ನಾಲ್ಕು ವನ್ಯಜೀವಿ ರಕ್ಷಣಾ ವಿಭಾಗಗಳಿದ್ದು, ಇತ್ತೀಚೆಗೆ ಮತ್ತೆ 2 ವಿಭಾಗಕ್ಕೆ ಅನುಮೋದನೆ ನೀಡಲಾಗಿದೆ. ಇಲ್ಲಿ ಗಾಯಗೊಂಡ ಅಥವಾ ಗ್ರಾಮಕ್ಕೆ ನುಗ್ಗಿ ಮಾನವ – ವನ್ಯಜೀವಿ ಸಂಘರ್ಷಕ್ಕೆ ಕಾರಣವಾದ ಸೆರೆಹಿಡಿದ 8 ಹುಲಿ ಅಥವಾ ಚಿರತೆಗಳನ್ನು ಸಂರಕ್ಷಿಸಬಹುದಾಗಿದೆ ಎಂದರು.
ಆನೆಗಳ ಈಜುಕೊಳ:ಕಾಡಿನಲ್ಲಿ ತಾಯಿಯಿಂದ ಬೇರ್ಪಟ್ಟ ಆನೆ ಮರಿಗಳನ್ನು ಪೋಷಿಸಲು ಕೂರ್ಗಳ್ಳಿಯಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ 2 ಆನೆ ಮರಿ ಮತ್ತು 3 ದೊಡ್ಡ ಆನೆಗಳಿದ್ದು, ಇವುಗಳಿಗಾಗಿಯೇ ವಿಶೇಷವಾಗಿ ಈಜುಕೊಳ ವಿನ್ಯಾಸಗೊಳಿಸಲಾಗಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.
ಇದನ್ನೂ ಓದಿ: ನಾಡಿನೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ನಾಗರಪಂಚಮಿ ಆಚರಣೆ - Nagara Panchami