ಮೈಸೂರು:ಆಧುನಿಕ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಪ್ರಯಾಣಿಕರ ಸ್ನೇಹಿಯಾಗುವತ್ತ ಹೆಜ್ಜೆ ಇಟ್ಟಿದೆ. ಪ್ರಯಾಣಿಕರು ಸಾಮಾನ್ಯ ಟಿಕೆಟ್, ಕಾಯ್ದಿರಿಸುವ ಟಿಕೆಟ್ ಫ್ಲಾಟ್ಫಾರ್ಮ್ ಟಿಕೆಟ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ಸಮಸ್ಯೆ ತಪ್ಪಿಸಿದೆ. ಪ್ರಯಾಣಿಕರ ಅನುಕೂಲತೆಗಾಗಿ ಕ್ಯೂ ಆರ್ ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆ ಜಾರಿಗೆ ತರಲಾಗಿದೆ.
ನಿಲ್ದಾಣದಲ್ಲಿ ಪ್ರಯಾಣಿಕರು ಸಾಮಾನ್ಯ ವರ್ಗದ ಟಿಕೆಟ್‌ಗಳನ್ನು ಮತ್ತು ಫ್ಲಾಟ್ಫಾರ್ಮ್ ಟಿಕೆಟ್‌ಗಳನ್ನು ಖರೀದಿಸುವ ವಿಧಾನದಲ್ಲಿ ಬದಲಾವಣೆ ತರುವ ಜೊತೆಗೆ ನವೀನ ಸೌಲಭ್ಯವು ಈಗ 81 ನಿಲ್ದಾಣಗಳಾದ್ಯಂತ 94 ಅನ್‌ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್ (ಯುಟಿಎಸ್) ಕೌಂಟರ್‌ಗಳಲ್ಲಿ ಲಭ್ಯವಿದೆ. ಈ ಕ್ಯೂ ಆರ್ ಕೋಡ್ ಆಧಾರಿತ ಟಿಕೆಟ್ ಮೂಲಕ ಪ್ರಯಾಣಿಕರು ತಡೆರಹಿತ ಮತ್ತು ಅನುಕೂಲಕರ ಅನುಭವದ ಪ್ರಯಾಣ ಹೊಂದ ಬಹುದಾಗಿದೆ.
ಹಲವು ಕಡೆ ಟಿಕೆಟ್ ವಿತರಣಾ ಯಂತ್ರ:ನಿಲ್ದಾಣದಲ್ಲಿ 25 ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳನ್ನು (ಎಟಿವಿಎಂ) 12 ಸ್ಥಳಗಳಲ್ಲಿ ಕಾರ್ಯತಂತ್ರವಾಗಿ ಸ್ಥಾಪಿಸಲಾಗಿದೆ. ಪ್ರಯಾಣಿಕರು ಕಾಯ್ದಿರಿಸದ ಪ್ರಯಾಣದ ಟಿಕೆಟ್‌ಗಳು ಮತ್ತು ಪ್ಲಾಟ್ಫಾರ್ಮ್ ಟಿಕೆಟ್‌ಗಳನ್ನು ಸುಲಭವಾಗಿ ಖರೀದಿಸಲು ಅವಕಾಶ ನೀಡಲಾಗಿದೆ. ಟಿಕೆಟ್ ಬುಕಿಂಗ್ ಹೆಚ್ಚಿಸುವ ಪ್ರಯತ್ನದಲ್ಲಿ, ನಾಲ್ಕು ನಿಲ್ದಾಣಗಳಲ್ಲಿ ಪ್ರಯಾಣಿಕರ ಕಾಯ್ದಿರಿಸುವಿಕೆ ವ್ಯವಸ್ಥೆ ( ಪಿಆರ್‌ಎಸ್) ಟಿಕೆಟ್ ಬುಕಿಂಗ್ಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಸೌಲಭ್ಯವನ್ನು ಸಹ ಪ್ರಾಯೋಗಿಕವಾಗಿ ಮಾಡಲಾಗುತ್ತಿದೆ.