ಮೈಸೂರು: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ವಾಸು ಇಂದು ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ವಾಸು ಅವರಿಗೆ 71 ವರ್ಷ ವಯಸ್ಸಾಗಿತ್ತು. 1953 ರಲ್ಲಿ ಜನಿಸಿದ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ವೀರಪ್ಪ ಮೊಯ್ಲಿ ಅವರ ಆಪ್ತರಾಗಿದ್ದರು. ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮೈಸೂರು ನಗರದ ಚಾಮರಾಜನಗರ ಕ್ಷೇತ್ರದಲ್ಲಿ 2013 ರಲ್ಲಿ ಕಾಂಗ್ರೆಸ್ ಶಾಸಕರಾದ ಇವರು 2018 ರ ವಿಧಾನಸಭೆ ಚುನಾವಣೆಗೆ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ದಿಂದ ಟಿಕೆಟ್ ಕೈ ತಪ್ಪಿತ್ತು.
ಸರಳ ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿ ಎಂದೇ ಹೆಸರು ಪಡೆದಿದ್ದ ವಾಸು ಅವರು ಮೈಸೂರಿನಲ್ಲಿ ವಿದ್ಯಾವಿಕಾಸ್ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದರು. ಇದರ ಜೊತೆಗೆ ಮೈಸೂರು ಜಿಲ್ಲಾ ಕೈಗಾರಿಕಾ ಸಂಘಗಳ ಅಧ್ಯಕ್ಷರಾಗಿ ಹಾಗೂ ಸಹಕಾರಿ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೈಸೂರಿನಲ್ಲಿ ಪ್ರಜಾನುಡಿ ಎಂಬ ಪ್ರಾದೇಶಿಕ ಪತ್ರಿಕೆಯನ್ನು ಸ್ಥಾಪಿಸಿದ್ದು, ಅದು ಇಂದಿಗೂ ಮುನ್ನಡೆಯುತ್ತಿದೆ.
ವಾಸು ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ:ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ವಾಸು ಅವರ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. "ವಾಸು ಅವರ ನಿಧನ ಸುದ್ದಿ ಕೇಳಿ ಬಹಳ ನೋವು ಆಗಿದೆ. ನನ್ನ ಆತ್ಮೀಯರು ಆಗಿದ್ದ ವಾಸು ಅವರ ಜೊತೆಗಿನ ರಾಜಕೀಯ ಪಯಣದಲ್ಲಿ ಒಡನಾಟ ಹೊಂದಿದ್ದೆ. ಅವರು ಮೈಸೂರು ಮೇಯರ್ ಆಗಿ ನಂತರ ಶಾಸಕರಾಗಿ, ಮೈಸೂರು ಚಾಮರಾಜನಗರ ಭಾಗದಲ್ಲಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಅಗಲಿಕೆ ಪಕ್ಷಕ್ಕೆ ನೋವು ತಂದಿದೆ. ವಾಸು ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬಕ್ಕೆ ವಾಸು ಅಗಲಿಕೆಯ ದುಃಖ. ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ:ಹುಟ್ಟೂರು ಬಿಡದಿಯ ತೋಟದಲ್ಲಿ ಕೆ.ಶಿವರಾಮ್ ಅಂತ್ಯಸಂಸ್ಕಾರಕ್ಕೆ ಸಿದ್ಧತೆ