ಹಾವೇರಿ: ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾವೇರಿ ನಗರದ ಹೆಗ್ಗೇರಿ ನದಿ ಹಿಂಗಾರು ಮಳೆಗೆ ಕೋಡಿ ಬಿದ್ದಿದೆ. ಹೆಗ್ಗೇರಿ ಕೆರೆಯ ನೀರು ಸ್ವಾತಂತ್ರ್ಯ ಯೋಧ, ಹುತಾತ್ಮ ಮೈಲಾರ ಮಹಾದೇವ ಸ್ಮಾರಕಕ್ಕೆ ನುಗ್ಗಿದೆ. ಜೊತೆಗೆ, ಪಕ್ಕದಲ್ಲಿರುವ ಮೈಲಾರ ಮಹಾದೇವ ಸಂಕೀರ್ಣ ಜಲಾವೃತಕೊಂಡಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಹಳ್ಳದ ಹೂಳೆತ್ತದೆ ಮತ್ತು ಸೂಕ್ತ ತಡೆಗೋಡೆ ನಿರ್ಮಾಣ ಮಾಡದೆ ಇರುವ ಕಾರಣಕ್ಕೆ ಮೈಲಾರ ಮಹಾದೇವ ಸ್ಮಾರಕವಿರುವ ವೀರಸೌಧ ಜಲಾವೃತಗೊಂಡಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಮೈಲಾರ ಮಹಾದೇವಪ್ಪ ಸ್ಮಾರಕ ಜಲಾವೃತ (ETV Bharat) ದೇಶಪ್ರೇಮಿ ಮಾಲತೇಶ ಅಂಗೂರು ಮಾತನಾಡಿ, "ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿ ಬ್ರಿಟಿಷರ ಗುಂಡಿಗೆ ಬಲಿಯಾದ ಮೈಲಾರ ಮಹಾದೇವ, ತಿರುಕಪ್ಪ ಮಡಿವಾಳ ಮತ್ತು ವೀರಯ್ಯ ಹಿರೇಮಠ ಅವರ ಸಮಾಧಿ ಸ್ಥಳವಾದ ಇಲ್ಲಿ ಪಂಜಾಬ್ನ ಅಮೃತಸರ ಮಾದರಿಯಲ್ಲಿ ವೀರಸೌಧವನ್ನು ನಿರ್ಮಾಣ ಮಾಡಿದ್ದಾರೆ. ಇದರ ರಕ್ಷಣೆ ತಡೆಗೋಡೆ ನಿರ್ಮಿಸಿಲ್ಲ. ಇದರಿಂದ ಮಳೆ ಬಂದರೆ ವೀರಸೌಧ ಮತ್ತು ಸಾಂಸ್ಕೃತಿಕ ಭವನ ಸಂಪೂರ್ಣ ಜಲಾವೃತವಾಗುತ್ತದೆ. ಇಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆದಿದೆ. ತಕ್ಷಣ ಅಧಿಕಾರಿಗಳು ಹಳ್ಳದ ಹೂಳೆತ್ತಬೇಕು ಮತ್ತು ತಡೆಗೋಡೆ ನಿರ್ಮಿಸಬೇಕು" ಎಂದು ಆಗ್ರಹಿಸಿದರು.
ಸಾಕ್ಷ್ಯಚಿತ್ರ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ ಮಾತನಾಡಿ, "ಹಾವೇರಿಯಲ್ಲಿ ಧಾರಾಕಾರ ಮಳೆಯಾಗಿ ಹೆಗ್ಗೇರಿ ಕೆರೆ ತುಂಬಿ ಕೋಡಿ ಬಿದ್ದ ಪ್ರತಿ ಬಾರಿಯೂ ವೀರಸೌಧ ಮತ್ತು ಇತರೆ ಸಂಕೀರ್ಣಗಳು ಜಲಾವೃತವಾಗುತ್ತವೆ. ಇದು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಪರಮಾವಧಿ. ಮೂವರು ಸ್ವಾತಂತ್ರ್ಯ ಹೋರಾಟಗಾರರ ಸಮಾಧಿ ಸ್ಥಳಕ್ಕೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ತಡೆಗೋಡೆ ನಿರ್ಮಿಸಬೇಕು" ಎಂದು ಒತ್ತಾಯಿಸಿದರು.
ವೀರಸೌಧ ಜಲಾವೃತ (ETV Bharat) ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಮೈಲಾರ ಮಹಾದೇವಪ್ಪನವರು ಮಹಾತ್ಮ ಗಾಂಧೀಜಿ ನಡೆಸಿದ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಏಕೈಕ ಕನ್ನಡಿಗರಾಗಿದ್ದಾರೆ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಮೈಲಾರ ಮಹಾದೇವಪ್ಪನವರು ತಮ್ಮದೇ ಆದ ತಂಡ ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದರು. ಮೈಲಾರ ಮಹಾದೇವ, ತಿರುಕಪ್ಪ ಮಡಿವಾಳ ಮತ್ತು ವೀರಯ್ಯ ಹಿರೇಮಠ 1943ರಲ್ಲಿ ಖಜಾನೆಗೆ ಮುತ್ತಿಗೆ ಹಾಕಿದಾಗ ಬ್ರಿಟಿಷರ ಗುಂಡೇಟಿಗೆ ಬಲಿಯಾದರು. ನಂತರ ದೇಶಪ್ರೇಮಿಗಳು ಅವರ ಮೃತದೇಹಗಳನ್ನು ಹಾವೇರಿಯ ಹೊರವಲಯಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಿದ್ದರು. ಅವರ ಈ ಸಮಾಧಿ ಸ್ಥಳವನ್ನು ಸರ್ಕಾರ ಅಭಿವೃದ್ಧಿಪಡಿಸಿ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವೀರಸೌಧ ಮತ್ತು ಸಂಕೀರ್ಣ ನಿರ್ಮಿಸಿತ್ತು.
ಮೈಲಾರ ಮಹಾದೇವಪ್ಪ ಸ್ಮಾರಕ ಜಲಾವೃತ (ETV Bharat) ಇದನ್ನೂ ಓದಿ:ಧಾರವಾಡ: ಹಾವಿನ ದ್ವೇಷದ ಭಯಕ್ಕೆ ಒಂದೇ ರಾತ್ರಿಯಲ್ಲಿ ದೇವಸ್ಥಾನ ನಿರ್ಮಾಣ, ಹೀಗೊಂದು ಅಚ್ಚರಿಯ ಸಂಗತಿ!