ಕರ್ನಾಟಕ

karnataka

ETV Bharat / state

ಜಕ್ಕನಾಯಕನಕೊಪ್ಪ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೊಹರಂ ಆಚರಣೆ - Muharram Celebration - MUHARRAM CELEBRATION

ಬೆಳಗಾವಿಯ ಜಕ್ಕನಾಯಕ‌ನಕೊಪ್ಪ ಗ್ರಾಮದಲ್ಲಿ ಹಿಂದೂ, ಮುಸ್ಲಿಂ ಸಮುದಾಯದವರು ಧರ್ಮಬೇಧ ಮರೆತು ಭಾವೈಕ್ಯತೆಯಿಂದ ಒಟ್ಟಿಗೆ ಮೊಹರಂ ಹಬ್ಬವನ್ನು ಆಚರಿಸುವ ಮೂಲಕ ಸಾಮರಸ್ಯ ಮೆರೆದರು.

ಭಾವೈಕ್ಯತೆಯ ಮೊಹರಂ ಆಚರಣೆ
ಭಾವೈಕ್ಯತೆಯ ಮೊಹರಂ ಆಚರಣೆ (ETV Bharat)

By ETV Bharat Karnataka Team

Published : Jul 17, 2024, 10:29 PM IST

Updated : Jul 17, 2024, 10:59 PM IST

ಮೊಹರಂ ಆಚರಣೆ (ETV Bharat)

ಬೆಳಗಾವಿ: ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಸನ್, ಹುಸೇನ್‌ರ ಸ್ಮರಣೆಗಾಗಿ ಹಾಗೂ ಬಲಿದಾನದ ದ್ಯೋತಕವಾಗಿರುವ ಮೊಹರಂ ಹಬ್ಬವನ್ನು ಬೆಳಗಾವಿ ನಗರ ಸೇರಿ ಜಿಲ್ಲೆಯಾದ್ಯಂತ ಬುಧವಾರ ಭಕ್ತಿ ಭಾವದಿಂದ ಆಚರಿಸಲಾಯಿತು. ಬೈಲಹೊಂಗಲ ತಾಲ್ಲೂಕಿನ ಜಕ್ಕನಾಯಕ‌ನಕೊಪ್ಪ ಗ್ರಾಮದಲ್ಲಿ ಒಂದೇ ಮುಸ್ಲಿಂ ಕುಟುಂಬದವರು ಇದ್ದರೂ ಕೂಡ ಎಲ್ಲರೂ ಒಗ್ಗಟ್ಟಾಗಿ ಹಬ್ಬ ಆಚರಿಸುವ ಮೂಲಕ ಇಡೀ ಸಮಾಜಕ್ಕೆ ಭಾವೈಕ್ಯತೆ ಸಂದೇಶ ಸಾರಿದ್ದಾರೆ.

ಮೊಹರಂ ಕೇವಲ ಮುಸ್ಲಿಂ ಸಮಾಜಕ್ಕೆ ಸಂಬಂಧಿಸಿದ್ದಲ್ಲ, ಇದು ಧರ್ಮಾತೀತ, ಜಾತ್ಯತೀತ ಎಂಬುದನ್ನು ನಿರೂಪಿಸಿದ್ದಾರೆ. ಪಂಜಾ ಮತ್ತು ತಾಬೂತುಗಳನ್ನು ಹೊತ್ತುಕೊಂಡಿದ್ದ ಭಕ್ತರು ಬೆಂಕಿಯ ಕಿಚ್ಚು ಹಾಯ್ದು ತಮ್ಮ ಭಕ್ತಿ ಪರಾಕಾಷ್ಟೆ ಮೆರೆದರು‌. ಮಳೆಯ ನಡುವೆಯೂ ಎಲ್ಲರೂ ಭಕ್ತಿಯ ಹೊಳೆ ಹರಿಸಿದ್ದು ವಿಶೇಷವಾಗಿತ್ತು.

ಈ ಕುರಿತು ಗ್ರಾಮದ ಮುಖಂಡ ಪ್ರಕಾಶ್​ ಭಾವಿಕಟ್ಟಿ ಮಾತನಾಡಿ, ನಮ್ಮ ಪೂರ್ವಜರ ಕಾಲದಿಂದಲೂ ನಾವೆಲ್ಲಾ ಒಂದೇ ಎನ್ನುವ ರೀತಿ ಮೊಹರಂ ಆಚರಿಸುತ್ತ ಬಂದಿದ್ದೇವೆ. ಭಕ್ತರು ಬೇಡಿದ್ದನ್ನು ದೇವರು ಈಡೇರಿಸುವ ನಂಬಿಕೆ ಎಲ್ಲರಲ್ಲಿದೆ. ಹಾಗಾಗಿ, ನಮ್ಮೂರು ಸೇರಿ‌ದಂತೆ ಅಕ್ಕಪಕ್ಕದ ಊರಿನ ಜನರು ಹೆಚ್ಚಿನ‌ ಸಂಖ್ಯೆಯಲ್ಲಿ ಸೇರುತ್ತಾರೆ ಎಂದು ಹೇಳಿದರು. ಬೆಳಗಾವಿ ಜಿಲ್ಲೆಯ ಪ್ರತಿ ಹಳ್ಳಿಯಲ್ಲೂ ಚಿನಕೋಲು ಕುಣಿತ, ಹುಲಿ ವೇಷಧಾರಿಗಳು ಹೆಜ್ಜೆ ಹಾಕಿದರು. ಮೆರವಣಿಗೆ ಮುಗಿದ ಬಳಿಕ ಪಂಜಾ ಮತ್ತು ತಾಬೂತುಗಳನ್ನು ವಿಸರ್ಜಿಸಲಾಯಿತು. ಒಟ್ಟಾರೆ ಶ್ರದ್ಧಾ ಭಕ್ತಿಯಿಂದ ಎಲ್ಲರೂ ಒಗ್ಗಟ್ಟಾಗಿ ಮೊಹರಂ ಹಬ್ಬವನ್ನು ಆಚರಿಸಿದರು.

ಬೆಳಗಾವಿ ನಗರದಲ್ಲೂ ಭಕ್ತಿಯ ಮೊಹರಂ ಆಚರಣೆ: ಕೇವಲ ಗ್ರಾಮೀಣ ಭಾಗ ಅಷ್ಟೇ ಅಲ್ಲದೇ ಬೆಳಗಾವಿ ನಗರದ ಖಂಜರ್ ಗಲ್ಲಿ, ದರ್ಬಾರ್‌ಗಲ್ಲಿ, ಗಾಂಧಿನಗರ, ಟೋಪಿಗಲ್ಲಿ, ರವಿವಾರಪೇಟೆ ಒಳಗೊಂಡು ನಗರದ ವಿವಿಧ ಬಡಾಣೆಗಳಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಪಂಜಾ, ತಾಬೂತಗಳು ಹಬ್ಬದ 10ನೇ ದಿನವಾದ ಬುಧವಾರ ಬೆಳಗ್ಗೆ ದರ್ಬಾರ್‌ ಗಲ್ಲಿಯಲ್ಲಿ ಸಮ್ಮಿಲನಗೊಂಡು, ನಂತರ ತಮ್ಮ ಬಡಾವಣೆ ಸ್ಥಳಕ್ಕೆ ಮರಳಿದವು. ಪಂಜಾಗಳ ಈ ಅಪೂರ್ವ ಮಿಲನವನ್ನು ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು.

ಇದನ್ನೂ ಓದಿ:ಕೊಪ್ಪಳ: ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಮೊಹರಂ - muharram celebration

Last Updated : Jul 17, 2024, 10:59 PM IST

ABOUT THE AUTHOR

...view details